ಕರಾವಳಿ

ಕುಂದಾಪುರ | ಕೆಲಸದ ವೇಳೆ ವಿದ್ಯುತ್ ಶಾಕ್ ತಗುಲಿ ಗಾರೆ ಕಾರ್ಮಿಕ ಮೃತ್ಯು

Pinterest LinkedIn Tumblr

ಕುಂದಾಪುರ: ನಿರ್ಮಾಣ ಹಂತದ ಮನೆಯೊಂದರ ಗಾರೆ ಕೆಲಸದ ಮಾಡುತ್ತಿದ್ದ ವೇಳೆ ಕಬ್ಬಿಣದ ಏಣಿಯನ್ನು  ಮತ್ತೊಂದೆಡೆ ಸ್ಥಳಾಂತರಿಸುವಾಗ ಮನೆ ಹಿಂಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಏಣಿ ಸ್ಪರ್ಶವಾದ ಪರಿಣಾಮ ಶಾಕ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಕುಂದಾಪುರದ ಕಡ್ಗಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಕುಂದಾಪುರ ತಾಲೂಕಿನ ಮೂಡ್ಲಕಟ್ಟೆ ಸಮೀಪದ ಕಂದಾವರ ಸಾಂತಾವರ ನಿವಾಸಿ ಮುತ್ತ-ಗಂಗಾ ದಂಪತಿಗಳ ಪುತ್ರ ಶಿವರಾಜ್ (35) ಮೃತ ದುರ್ದೈವಿ. ಇವರು ಕಳೆದ 15 ವರ್ಷಗಳಿಂದ ಗಾರೆ ವೃತ್ತಿ‌ಮಾಡಿಕೊಂಡಿದ್ದರು.

ಘಟನೆ ವಿವರ: ಕುಂದಾಪುರ ಹೊರವಲಯದ ಕಡ್ಗಿಮನೆ ರಸ್ತೆಯ ಕೊನೆಯಲ್ಲಿ ಪ್ರವೀಣ್ ಖಾರ್ವಿ ಎನ್ನುವರ ನಿರ್ಮಾಣ ಹಂತದಲ್ಲಿರುವ ಮನೆಯ ಗಾರೆ ಕೆಲಸಕ್ಕೆ ಸೋಮವಾರ ಶಿವರಾಜ್ ಹಾಗೂ ಇತರರು ಬಂದಿದ್ದು ತನ್ನ ಜೊತೆ ಕೆಲಸ ಮಾಡುವ ಇನ್ನಿಬ್ಬರು ಕೆಲಸಗಾರರೊಂದಿಗೆ ಕಬ್ಬಿಣದ ಏಣಿಯನ್ನು ಬೇರೆ ಕಡೆಗೆ ಹೊತ್ತೊಯ್ಯುವಾಗ ಆಕಸ್ಮಿಕವಾಗಿ ಏಣಿ‌ ಆಯತಪ್ಪಿ ಅಲ್ಲಿಯೇ ಹಾದು ಹೋಗಿರುವ ವಿದ್ಯುತ್‌ ತಂತಿಗೆ ತಾಗಿ ವಿದ್ಯುತ್‌  ಶಾಕ್ ತಗುಲಿದ್ದರಿಂದ ಶಿವರಾಜ್‌ ತೀವೃ ಅಸ್ವಸ್ಥಗೊಂಡಿದ್ದರು. ತಕ್ಷಣ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಶಿವರಾಜ್ ಮೃತಪಟ್ಟಿದ್ದರು. ಘಟನೆಯಲ್ಲಿ ಇನ್ನಿಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮೃತ ಶಿವರಾಜ್ ಅವಿವಾಹಿತರಾಗಿದ್ದರು.

ಕುಂದಾಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಪುಷ್ಪಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಸಹೋದರ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.