ಕುಂದಾಪುರ: ಸರಕಾರದ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಆರೋಗ್ಯ, ಸೇವಾ ವಲಯ, ಕೈಗಾರಿಕಾ, ಕೃಷಿ, ಇತರೆ ಕಂಪೆನಿಗಳ ಸಹಿತ 60 ಕ್ಕೂ ಮಿಕ್ಕಿ ಸಂಸ್ಥೆಗಳು ಬರಲಿದೆ. ಇದು ಈ ಭಾಗದ ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ಉತ್ತಮ ಅವಕಾಶವಾಗಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಎ.2 ರಂದು ನಡೆಯುವ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆಗೊಳಿಸಿ, ಮಾತನಾಡಿದರು.
ಉಡುಪಿ ಜಿ.ಪಂ. ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ಈ ಉದ್ಯೋಗ ಮೇಳದ ಹಿಂದೆ ಹಲವು ದಿನದ ಶ್ರಮವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಿ. ಸಂದರ್ಶನಕ್ಕೆ ಸರಿಯಾಗಿ ಸಿದ್ದತೆ ಮಾಡಿಕೊಂಡು ಬನ್ನಿ. ಗ್ರಾಮೀಣ ಭಾಗದ ಯುವ ಜನರಿಗೆ ಉದ್ಯೋಗ ಸಿಗಬೇಕು ಎನ್ನುವುದು ಉದ್ಯೋಗ ಮೇಳದ ಉದ್ದೇಶ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವಾಲಯ, ಕೌಶಲಾಭಿವೃದ್ಧಿ, ಉದ್ಯಮಲಶೀಲತಾ ಮತ್ತು ಜೀವನೋಪಾಯ ಇಲಾಖೆ, ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ, ಜಿ.ಪಂ., ಕುಂದಾಪುರ ತಾ.ಪಂ, ಭಂಡಾರ್ ಕಾರ್ಸ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಈ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇ, ಬಿಕಾಂ, ಯಾವುದೇ ಪದವಿ, ಸ್ನಾತಕೋತ್ತರ ಪದವೀಧರರು ನಿಮ್ಮ ಪರಿಚಯ, ಆಧಾರ್ ಕಾರ್ಡ್, ಭಾವಚಿತ್ರ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು.
ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕುಂದಾಪುರ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಮಹೇಶ್ ಕುಮಾರ್, ತಾ.ಪಂ.ವ್ಯವಸ್ಥಾಪಕ ರಾಮಚಂದ್ರ ಮಯ್ಯ, ಕಾಲೇಜಿನ ಆಡಳಿತ ವ್ಯವಸ್ಥಾಪಕ ಗೋಪಾಲ್, ಜಿ.ಪಂ. ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
ಭಂಡಾರ್ ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರ ಆಚಾರ್ಯ ಪ್ರಸ್ತಾವಿಸಿ, ಸ್ವಾಗತಿಸಿದರು.
Comments are closed.