ಕರಾವಳಿ

ಬೈಂದೂರು ರೈತರ ಧರಣಿ 33ನೇ ದಿನಕ್ಕೆ | ಕೋಣಗಳೊಂದಿಗೆ ಬೈಂದೂರು ಆಡಳಿತ ಸೌಧ, ಪಟ್ಟಣ ಪಂಚಾಯತ್ ಕಛೇರಿ ಮುತ್ತಿಗೆ! 

Pinterest LinkedIn Tumblr

ಬೈಂದೂರು: ಪಟ್ಟಣ ಪಂಚಾಯತ್‌ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈಬಿಡಬೇಕೆಂದು ಆಗ್ರಹಿಸಿ ರೈತ ಸಂಘ ಬೈಂದೂರು ಇದರ ವತಿಯಿಂದ ತಾಲೂಕು ಆಡಳಿತ ಸೌಧದ ಎದುರು ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯು 33 ದಿನದಿಂದ ನಡೆಯುತ್ತಿದೆ.

ಜಿಲ್ಲಾಡಳಿತ, ಸರಕಾರವು ಸಮರ್ಪಕ ಸ್ಪಂದನೆ ನೀಡುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಹತ್ತಾರು ಜೊತೆ ಕೋಣಗಳ ಜೊತೆಗೆ ಬೈಂದೂರು ಪಟ್ಟಣ ಪಂಚಾಯತ್‌ ಮತ್ತು ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಮಾತನಾಡಿ, ಕಳೆದ ಒಂದೂವರೆ ತಿಂಗಳಿಂದ ಕೃಷಿಕರು ಕೆಲಸ ಬಿಟ್ಟು ನ್ಯಾಯಕ್ಕಾಗಿ ಧರಣಿ ಕುಳಿತಿದ್ದಾರೆ. ಸೌಜನ್ಯಕ್ಕಾದರು ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ಮಾಡಿಲ್ಲ. ರೈತ ಮುಖಂಡರ ಜೊತೆ ಜನಪ್ರತಿನಿಧಿಗಳು  ಚರ್ಚೆ ನಡೆಸಿಲ್ಲ. ಸರಕಾರದಿಂದ ನ್ಯಾಯ ಸಿಗುವ ನಿರೀಕ್ಷೆಯಿರುವ ಕಾರಣ ಶಾಂತ ಪ್ರತಿಭಟನೆ ನಡೆಸುತ್ತಿದ್ದು ಸೋಮವಾರದಿಂದ ಉಗ್ರ ಪ್ರತಿಭಟನೆ ನಡೆಯಲಿದೆ ಎಂದರು.

ಜನಸಾಮಾನ್ಯವಾಗಿ ರೈತರು ಧರಣಿ ನಿರತರಾದರೆ ಆಡಳಿತ ಜನನಾಯಕರು, ಅಧಿಕಾರಿಗಳು ಸ್ಪಂಧಿಸದಿರುವ ಕುರಿತು ರೈತರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು, ಮಾಜಿ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ರೈತರನ್ನು ಭೇಟಿ ಮಾಡಿ ಸರಕಾರದ ಗಮನಸೆಳೆಯಬೇಕು ಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,  ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದ್ದು ಉಸ್ತುವಾರಿ ಸಚಿವರು, ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಮಂತ್ರಿಗಳ ಗಮನಕ್ಕೆ ತರಲಾಗಿದ್ದು ಕಡತ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಸರಕಾರವು ಈ ಭಾಗದವರಿಗೆ ನ್ಯಾಯ ದೊರಕಿಸಿಕೊಡುವ ಭರವಸೆಯಿದೆ ಎಂದರು.

ತಾಲೂಕು ಕಂಬಳ ಸಮಿತಿ ವತಿಯಿಂದ ಬ್ರಹತ್‌ ಜಾಥಾ: ಬೈಂದೂರು ತಾಲೂಕು ಕಂಬಳ ಸಮಿತಿ ಶುಕ್ರವಾರದ ಧರಣಿ ನೇತ್ರತ್ವ ವಹಿಸಿದ್ದರು. ಸುಮಾರು ಹತ್ತು ಜೊತೆ ಕೋಣಗಳ ಜೊತೆ ಬೈಂದೂರು ಪಟ್ಟಣ ವ್ಯಾಪ್ತಿ ಜಾಥಾ ನಡೆಸಿದರು. ಪಟ್ಟಣ ಪಂಚಾಯತ್‌ ಹಾಗೂ ತಾಲೂಕು ಆಡಳಿತ ಸೌಧದ ಎದುರು ಕೋಣಗಳನ್ನು ಕಟ್ಟಿ ನ್ಯಾಯಕ್ಕಾಗಿ  ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ಮಂಜುನಾಥ ಪೂಜಾರಿ ಸಸಿಹಿತ್ಲು, ಜಿಲ್ಲಾ ಸಮಿತಿ ಸದಸ್ಯವಿಕ್ರಮ ಪೂಜಾರಿ ಸಸಿಹಿತ್ಲು, ಕಂಬಳ ಸಮಿತಿ ಸದಸ್ಯರು ಹಾಗೂ ರೈತ ಮುಖಂಡರು ಹಾಜರಿದ್ದರು.

Comments are closed.