ಕುಂದಾಪುರ: ರಾಜ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹೋರಾಟ, ಚಳುವಳಿಗಳ ಮೂಲಕ ಶೋಷಿತರ ಪರವಾಗಿ ನಿಲ್ಲುವ ಸಮಾಜಮುಖಿ ಕಾರ್ಯಗಳು ನಡೆದಿದೆ. ಸಂಘಟನೆಯು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆಯೂ ತೀವೃ ಹೋರಾಟ ನಡೆಸಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ವಾಭಿಮಾನದ ಬದುಕಿನ ಚಿಂತನೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯಿಂದ ಡಿ.9 ಸೋಮವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಕುಂದಾಪುರ ತಾಲೂಕು ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ‘ನವಚೇತನ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
1974ರಲ್ಲಿ ಆರಂಭವಾದ ಈ ದಲಿತ ಸಂಘರ್ಷ ಸಮಿತಿ ಸಂಘಟನೆ 50 ವರ್ಷಗಳನ್ನು ಪೂರೈಸುವ ಈ ಸಂದರ್ಭದಲ್ಲಿ ಹಿಂದಿನವರ ತ್ಯಾಗ ಬಲಿದಾನಗಳು ನಮ್ಮ ಈಗಿನ ಹೋರಾಟಕ್ಕೆ ಅಡಿಗಲ್ಲು. ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆಗೆ ನವ ಚೈತನ್ಯ ನೀಡುವ ಕಾರ್ಯ ಮಾಡಲಾಗುತ್ತಿದ್ದು ಹೊಸ ಸಮಿತಿ ನೇಮಕ, ವಿವಿಧ ಕಾರ್ಯಕ್ರಮ ಆಯೋಜನೆ ಸಹಿತ ಮನಸ್ಸುಗಳನ್ನು ಕಟ್ಟುವ ಚಿಂತನೆ ಮಾಡಲಾಗಿದೆ. ಸವಾಲುಗಳನ್ನು ಎದುರಿಸುವ ಚೈತನ್ಯ ಪಡೆಯಲು ನಿರಂತರವಾಗಿ ಚಳುವಳಿಗಳು ಗ್ರಾಮ ಮಟ್ಟದಲ್ಲಿ ನಡೆಯಲಿದೆ. ಸಂವಿಧಾನ ಬದಲಾವಣೆಯಂತಹ ಸಮಾಜ ವಿರೋಧಿ ನೀತಿಯ ವಿರುದ್ಧ ನಾವು ಪ್ರಶ್ನೆ ಮಾಡಬೇಕು ಎಂದರು.
ಕರ್ನಾಟಕ ದಸಂಸ ಉಡುಪಿ ಜಿಲ್ಲಾ ಪ್ರಧಾನಸಂಚಾಲಕ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ರಾಜ್ಯದಲ್ಲಿ ಬುದ್ದಿಜೀವಿಗಳು, ಸಂಘಟನೆ ಮುಂಚೂಣಿ ಹೋರಾಟಗಾರರು, ಸಾಹಿತಿಗಳು ಸಮ ಸಮಾಜದ ನಿರ್ಮಾಣಕ್ಕೆ ಕಠಿಬದ್ಧರಾಗಿದ್ದು ನಮ್ಮ ಸಂಘಟನೆಯೊಂದಿಗಿದ್ದಾರೆ. ದಲಿತ-ದಮನಿತರ ಪರ ಹೋರಾಡಲು ಜಿಲ್ಲೆಯ 7 ತಾಲೂಕಿನಲ್ಲಿ ಸಂಘಟನೆಯ ಸಮಿತಿ ಸಕ್ರಿಯಗೊಳಿಸಲಾಗಿದೆ. ಜಿಲ್ಲೆಯಲ್ಲಿರುವ 1238 ಎಕರೆ ಡಿಸಿ ಮನ್ನಾ ಭೂಮಿಯನ್ನು ಇನ್ನೂ ದಲಿತರಿಗೆ ಹಂಚುವ ಕಾರ್ಯ ಮಾಡಿಲ್ಲ. ಭೂಮಿ ಸಂಬಂಧಿತ ಹೋರಾಟಕ್ಕೆ ಸಂಘಟನೆ ಮುಂದಾಗಲಿದೆ ಎಂದರು.
ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿದರು. ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ನಾಗೂರು, ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ಮರವಂತೆ, ಸುರೇಶ್ ಬಾರ್ಕೂರು, ಕುಮಾರ್ ಕೋಟ, ಗೋಪಾಲಕೃಷ್ಣ ನಾಡ, ಶ್ರೀನಿವಾಸ ಮಲ್ಯಾಡಿ, ಕರುಣಾಕರ ಕಿರಿಮಂಜೇಶ್ವರ, ಭಾಸ್ಕರ ಕೆರ್ಗಾಲ್, ಮಹಿಳಾ ಒಕ್ಕೂಟದ ಗೀತಾ ಸುರೇಶ್ ಕುಮಾರ್, ನಯನಾ ಆದೀಶ್, ತಾಲೂಕು ನಿಯೋಜಿತ ಪ್ರಧಾನ ಸಂಚಾಲಕ ಕೆ.ಸಿ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು, ಗ್ರಾಮ ಶಾಖೆಯ ಸಂಚಾಲಕರುಗಳು, ಪದಾಧಿಕಾರಿಗಳಿದ್ದರು.
ಜಿಲ್ಲಾ ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ ಸ್ವಾಗತಿಸಿ, ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋದಿಸಿದರು. ಶಂಭು ಗುಡ್ಡಮ್ಮಾಡಿ, ಚೈತ್ರಾ ಯಡ್ತರೆ ನಿರೂಪಿಸಿದರು. ರವಿ ಬನ್ನಾಡಿ ಹೋರಾಟ ಗೀತೆ ಹಾಡಿದರು.
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸ ಮಾಡುತ್ತಿದೆ. ಸರಕಾರಿ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡುತ್ತಿದ್ದು ಮೀಸಲಾತಿ ಸೌಲಭ್ಯಗಳಿಂದ ದಲಿತರನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ದೇಶದ ವಿವಿದೆಡೆ ದಲಿತರು, ಬಡವರ ಮೇಲೆ ವಿವಿಧ ರೀತಿಯ ಶೋಷಣೆಗಳು ನಡೆದರೂ ಕೂಡ ಪ್ರಧಾನಮಂತ್ರಿಗಳು ಈ ಬಗ್ಗೆ ಮಾತನಾಡದಿರುವುದು ದುರದೃಷ್ಟಕರ ಸಂಗತಿ. ಶೋಷಿತರು, ದೀನ-ದಲಿತರು, ಬಡವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿಲ್ಲದೆ ಕೇವಲ ಬಂಡವಾಳಶಾಹಿಗಳನ್ನು ಪೋಷಿಸುವ ಕಾರ್ಯ ಮಾಡುತ್ತಿದ್ದಾರೆ. ಅಧಿಕಾರ ದಾಹದಿಂದ ವಿವಿಧ ಕುತಂತ್ರ ಮಾಡುತ್ತಿದ್ದು ಜಾತ್ಯಾತೀತ ವ್ಯವಸ್ಥೆ ಬೀಳಿಸಿ ಕೋಮುವಾದ ಸೃಷ್ಟಿಸುವ ಹುನ್ನಾರ ಮಾಡಲಾಗುತ್ತಿದೆ. ಸಂವಿಧಾನ ವಿರೋಧಿ, ದಲಿತರು, ಶೋಷಿತರ ವಿರೋಧಿ ನೀತಿಯೆಲ್ಲವೂ ಆರ್.ಎಸ್.ಎಸ್. ಪ್ರಾಯೋಜಿತ ಕಾರ್ಯವಾಗಿದ್ದು ಇದೆಲ್ಲಾ ಸವಾಲುಗಳನ್ನು ಎದುರಿಸಲು ಸಂಘಟಿತ ಚಳುವಳಿ ಅತ್ಯಗತ್ಯ.
– ಸುಂದರ್ ಮಾಸ್ತರ್ (ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ)
Comments are closed.