ಕರ್ನಾಟಕ

ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಇನ್ನಿಲ್ಲ

Pinterest LinkedIn Tumblr

ಬೆಂಗಳೂರು: ಮಾಜಿ ಸಿಎಂ ಎಸ್.‌ ಎಂ ಕೃಷ್ಣ (92) ಮಂಗಳವಾರ (ಡಿ.10 ರಂದು) ಬೆಳಿಗ್ಗಿನ ಜಾವ 2.30ರ ಸುಮಾರಿಗೆ ವಿಧಿವಶರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಇಂದು ಬೆಳಗಿನ ಜಾವ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದು ಬಂದಿದೆ. ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ ಇಡಲಾಗುತ್ತದೆ ಎಂದು ತಿಳಿದುಬಂದಿದೆ. ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಬೆಳಗ್ಗೆ (ಡಿ.11 ರಂದು) ನೆರವೇರಿಸಲಾಗುವುದು ಎಂದು ಎಸ್ ಎಂ ಕೃಷ್ಣ ಅವರ ದೀರ್ಘಕಾಲದ ಒಡನಾಡಿಗಳು, ಸಂಬಂಧಿಗಳು ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಎಂಬ ಗ್ರಾಮದಲ್ಲಿ 1932 ರ ಮೇ 1ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದ ಎಸ್​ಎಂ ಕೃಷ್ಣ ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರೌಢ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯ ಮತ್ತು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಲಾ ಸ್ಕೂಲ್​ನಿಂದಲೂ ಪದವಿ ಪಡೆದಿದ್ದರು.

1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಅವರು ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ‘ಪ್ರಜಾ ಸೋಷಿಯಲಿಸ್ಟ್ ಪಕ್ಷ’ಕ್ಕೆ ಎನ್ನುವ ಪಕ್ಷಕ್ಕೆ ಸೇರಿದ್ದರು. ಆ ನಂತರ 1967ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂಎಂ ಗೌಡ ವಿರುದ್ಧ ಸೋಲನುಭವಿಸಿದ್ದರು. 1968 ರಲ್ಲಿ ಅವರು ರಾಷ್ಟ್ರ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದ್ದರು. 1968ರ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿಯ ವಿರುದ್ಧ ಗೆಲುವು ಸಾಧಿಸಿ ಕೇಂದ್ರ ರಾಜಕೀಯಕ್ಕೆ ಪ್ರವೇಶ ಪಡೆದರು.
ADVERTISEMENT
1968 ರ ಉಪಚುನಾವಣೆಯ ನಂತರ ಮಂಡ್ಯ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1971 ಮತ್ತು 1980 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗಳನ್ನು ಗೆದ್ದಿದ್ದರು. ಆ ಸಮಯದಲ್ಲಿ ಮಂಡ್ಯವನ್ನು ಕಾಂಗ್ರೆಸ್‌ ಭದ್ರಕೋಟೆಯನ್ನಾಗಿ ಮಾಡಲು ಎಸ್‌ಎಂ ಕೃಷ್ಣ ಅವರ ಪಾತ್ರ ಪ್ರಧಾನವಾಗಿತ್ತು.
1999 ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಅವರು ಅದೇ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ಈ ಸಂದರ್ಭದಲ್ಲಿ ಅವರ ನೇತೃತ್ವದಲ್ಲಿ ನಡೆದ ಪಾಂಚಜನ್ಯ ಯಾತ್ರೆ ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಶಕ್ತಿ ತುಂಬಿತ್ತು.
ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಎಸ್‌ಎಂ ಕೃಷ್ಣ ಅವರು 2017 ರ ಜನವರಿ 29 ರಂದು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2017 ರ ಮಾರ್ಚ್​ನಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ವಯೋಸಹಜ ಕಾಯಿಲೆಯ ಸಮಸ್ಯೆಯಿಂದಾಗಿ ಅವರು 2023 ರ ಜನವರಿ 7 ರಂದು ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದರು.

Comments are closed.