ಕರಾವಳಿ

ಬೈಂದೂರಿನಲ್ಲಿ ಭಾರೀ ಮಳೆಗೆ ರಾಹುತನಕಟ್ಟೆ ಸರಕಾರಿ ಶಾಲೆ ಜಲಾವೃತ: ತರಗತಿ ಕೋಣೆಗಳಿಗೆ ನುಗ್ಗಿದ ನೀರು..!

Pinterest LinkedIn Tumblr

ಬೈಂದೂರು: ಕಳೆದೆರಡು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡ ಬಗ್ಗೆ ವರದಿಯಾಗಿದೆ. ವಿಪರೀತ ಮಳೆಯ ಪರಿಣಾಮ ಶನಿವಾರ ಮುಂಜಾನೆ ಯಡ್ತರೆ ಸಮೀಪ ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತಗೊಂಡಿದ್ದು ತರಗತಿ ಕೋಣೆಗಳಿಗೆ ನೀರು ನುಗ್ಗಿದ್ದು ಶಾಲಾ ಮಕ್ಕಳಿಗೆ ಶನಿವಾರ ರಜೆ ನೀಡಲಾಗಿದೆ.

ಪೋಷಕರ ಆಕ್ರೋಶ: ರಾಹುತನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಸಮರ್ಪಕವಾದ ಚರಂಡಿ ವ್ಯವಸ್ಥೆಗಳಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ ಹರಿದ ನೀರು ನೇರ ಶಾಲೆಯ ಆವರಣಕ್ಕೆ ಹರಿದು ಬರುತ್ತದೆ. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಆಗುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಚರಂಡಿ ಮತ್ತು ಇತರ ವ್ಯವಸ್ಥೆ ಮಾಡಲು ಅನೇಕ ಬಾರಿ ವಿನಂತಿಸುತ್ತಿದ್ದರು ಸಹ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸದ ಪರಿಣಾಮ ಶಾಲೆಗೆ ನೀರು ನುಗ್ಗಿದೆ. ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರಿಗೆ ಆತಂಕ ಉಂಟಾಗುತ್ತಿದೆ. ಅಧಿಕಾರಿಗಳು ಸಮರ್ಪಕವಾಗಿ ಕ್ರಮಕೈಗೊಳ್ಳಬೇಕು ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಬೈಂದೂರಿನ ವಿವಿಧ ಕಡೆ ಮಳೆಯ ಅಬ್ಬರ ಜೋರಾಗಿದ್ದು ಶನಿವಾರ ಮುಂಜಾನೆ ಬಹುತೇಕ ಕೃಷಿ ಭೂಮಿ ಜಲಾವೃತಗೊಂಡಿದೆ.ಸ್ಥಳಕ್ಕೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ, ಸಹ ಕಾರ್ಯದರ್ಶಿ ಸುಮಾ ಆಚಾರ್, ಉಸ್ತುವಾರಿ ರಾಘವೇಂದ್ರ, ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಗೀತಾ ಶೆಟ್ಟಿ ಹಾಗೂ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comments are closed.