ಪ್ರಮುಖ ವರದಿಗಳು

ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಇನ್ನಿಲ್ಲ

Pinterest LinkedIn Tumblr

ಹೈದರಾಬಾದ್‌: ಮಾಧ್ಯಮ ಲೋಕದ ದಿಗ್ಗಜ, ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ ನಸುಕಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ ನ ಸ್ಟಾರ್ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3:45ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ಜೂನ್ 5ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನೆ ಮಾಡಲಾಗಿದೆ. ರಾಮೋಜಿ ರಾವ್ ಅವರ ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ನವೆಂಬರ್ 16, 1936 ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಅವರು, ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ಫಿಲ್ಮ್ ಸ್ಟುಡಿಯೋ, ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ.

‘ಭಾರತ ಮಾಧ್ಯಮ ಲೋಕದಲ್ಲಿ ದೂರದೃಷ್ಟಿ ಹೊಂದಿದ್ದ ರಾಮೋಜಿ ರಾವ್ ಅವರ ನಿಧನ ತೀವ್ರ ದುಃಖವನ್ನುಂಟುಮಾಡಿದೆ. ಅವರ ಶ್ರೀಮಂತ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರಗಳ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಅವರ ಗಮನಾರ್ಹ ಪ್ರಯತ್ನಗಳ ಮೂಲಕ ಮಾಧ್ಯಮ ಮತ್ತು ಮನರಂಜನಾ ಜಗತ್ತಿನಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಯಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

Comments are closed.