ಕರಾವಳಿ

ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿಯಾದ ಬಿಜೆಪಿ ನಿಯೋಗ..!

Pinterest LinkedIn Tumblr

ಕುಂದಾಪುರ: ಲೋಕಸಭಾ ಚುನಾವಣೆ ಸಮೀಪವಾಗುತ್ತಿದ್ದಂತೆ ಕುಂದಾಪುರದಲ್ಲಿ ಚುನಾವಣಾ ಕಾರ್ಯತಂತ್ರಗಳು ಹೆಚ್ಚಿದೆ. ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮನೆಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಭೇಟಿಯ ತರುವಾಯ ಕುಂದಾಪುರ ಬಿಜೆಪಿ ಯುವ ಮುಖಂಡರು ಹಾಲಾಡಿಯವರನ್ನು ಭೇಟಿ ಮಾಡಿದ್ದಾರೆ.

ಈ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ಚುನಾವಣೆ ಎದುರಿಸುವ ಬಗ್ಗೆ ಬಿಜೆಪಿಗೆ ಹಾಲಾಡಿಯವರ ಮಾರ್ಗದರ್ಶನ ಕೂಡ ಮಹತ್ವದ್ದಾಗಿದ್ದರಿಂದ ಈ ಭೇಟಿ ಹಿಂದೆ ಹಲವು ಸಂಗತಿಗಳು ಅಡಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಹಾಗೂ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನೇತೃತ್ವದಲ್ಲಿ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ, ಸಲಹೆ ಸೂಚನೆ ಮಾರ್ಗದರ್ಶನವನ್ನು ಪಡೆಯಲಾಯಿತು ಎನ್ನಲಾಗಿದೆ.

ಈ ಸಂದರ್ಭ ಕುಂದಾಪುರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್.ಕೆ.ಎಸ್, ಕುಂದಾಪುರ, ನಿಕಟಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪಕ್ಷದ ಮುಖಂಡರಾದ ಸಂಪತ್ ಶೆಟ್ಟಿ ಶಾನಾಡಿ, ಪ್ರವೀಣ್ ಶೆಟ್ಟಿ ವಂಡಾರು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Comments are closed.