ಕರಾವಳಿ

ಕುಂದಾಪುರ: ಜನ್ನಾಡಿ ಕೊರಗರ ಕಾಲೋನಿಯಲ್ಲಿ ನಿರ್ಮಿಸಲಿರುವ 14 ಮನೆಗಳ ಭೂಮಿ ಪೂಜೆ, ಶಿಲಾನ್ಯಾಸ

Pinterest LinkedIn Tumblr

ಕುಂದಾಪುರ: ಮನೆಯಿಲ್ಲದವರಿಗೆ ಮನೆ ನಿರ್ಮಿಸಿ ಕೊಡುವುದು ಸರಕಾರದ ಜವಬ್ದಾರಿ. ಇದು ಸಂವಿಧಾನದಲ್ಲೂ ಬರೆದಿದೆ. ಕೊರಗ ಸಮುದಾಯದ ಮನೆ ನಿರ್ಮಾಣಕ್ಕೆ ಸರಕಾರದಿಂದ ಸಿಗುವ ಸಹಾಯಧನಕ್ಕೆ ಅಲೆದಾಡಿದರೆ ವರ್ಷಗಳೇ ಆಗಬಹುದೆಂಬುದನ್ನು ಮನಗಂಡು ನಮ್ಮ ಟ್ರಸ್ಟ್ ವತಿಯಿಂದ ಈ ಕೊರಗ ಕಾಲನಿಯಲ್ಲಿ ನಮ್ಮ ಧರ್ಮಬಾಂಧವರಾದ ಕೊರಗ ಸಮುದಾಯದವರಿಗೆ 14 ಸುಸಜ್ಜಿತ ಮನೆ ನಿರ್ಮಾಣದ ವಿಚಾರಕ್ಕೆ ಬಂದಿದ್ದೇವೆ ಎಂದು ಉದ್ಯಮಿ ಡಾ. ಎಚ್ಎಸ್ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜನ್ನಾಡಿ ಕೊರಗರ ಕಾಲೋನಿಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೊಸೈಟಿ (ರಿ) ಬೆಂಗಳೂರು ಇವರ ವತಿಯಿಂದ ಕೊರಗರ ಕಾಲೋನಿಯಲ್ಲಿ ನಿರ್ಮಿಸಲಿರುವ 14 ಮನೆಗಳ ಭೂಮಿ ಪೂಜೆ ಮತ್ತೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲ್ಲಿ ಒಂದೊಂದು ಮನೆಗೆ ತಲಾ 12 ಲಕ್ಷ ರೂನಂತೆ 14 ಮನೆಗಳನ್ನು ಕಟ್ಟಿಕೊಡಲಾಗುತ್ತಿದೆ. ಮಾತ್ರವಲ್ಲದೆ ಕೊರಗ ಸಮುದಾಯದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ದರಿದ್ದೇವೆ. ಇತ್ತೀಚೆಗೆ ಅಯೋಧ್ಯೆಗೆ ತೆರಳಿದ ಸಂದರ್ಭ ಪೇಜಾವರ ಶ್ರೀಗಳು ರಜತ ಕಳಶವನ್ನು ನೀಡಿ ಗೌರವಿಸಿದ್ದರು. ರಾಮಜನ್ಮ ಭೂಮಿಯಲ್ಲಿ ಕುಳಿತಿದ್ದಾಗ ರಾಮ ರಾಜ್ಯದ ಕಲ್ಪನೆಯ ಕುರಿತು ಸ್ವಾಮೀಜಿಯವರು ನೀಡಿದ ಪತ್ರವನ್ನು ಓದಿ ಈ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದೇನೆ ಎಂದರು.

ಶಿಲಾನ್ಯಾಸ ನೇರವೇರಿಸಿ, ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು, ನಮ್ಮ ದೇಶದಲ್ಲಿ ಇನ್ನೂ ಸಾಕಷ್ಟು ಜನ ವಸತಿ ಇಲ್ಲದೆ ಪರದಾಡುತ್ತಿದ್ದಾರೆ ಅಂತವರಿಗೂ ಕೂಡ ಮನೆಯಾಗಬೇಕಾದ ಅಗತ್ಯತೆ ಇದೆ ಎಂದು ಅಯೋಧ್ಯೆ ರಾಮಮಂದಿರದಲ್ಲಿ ಪ್ರೇರಣೆಯಾಗಿದ್ದು ಇದು ಹಿರಿಯ ಶ್ರೀಗಳ ಇಚ್ಚೆಯ ಕಾರ್ಯವಾಗಿತ್ತು. ಯಾರಿಗೂ ಮನೆಯಿಲ್ಲ ಎಂಬ ಕೊರಗು ಇರಬಾರದು ಎಂಬ ನಮ್ಮ‌ ಅನಿಸಿಕೆಗೆ ದಾನಿಗಳು ಮುಂದಾಗಿ ಮನೆ ನಿರ್ಮಾಣ ಮಾಡಿಕೊಡುತ್ತಿರುವುದು ಮಾದರಿ ಕಾರ್ಯ. ಕೊರಗ ಸಮುದಾಯ ಶಿಕ್ಷಣದಲ್ಲಿ ಕೂಡ ಮುಂದೆ ಬರಬೇಕು ಎಂದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಪೇಜಾವರ ಶ್ರೀಗಳನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು.

ಉಡುಪಿ ಯಕ್ಷ ಕಲಾರಂಗದ ಕಾರ್ಯದರ್ಶಿ ಮುರುಳಿ ಕಡೆಕಾರ್, ಸತ್ಯನಾರಾಯಣ ಆಚಾರ್, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸೊಸೈಟಿಯ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಉದಯಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Comments are closed.