ಕರಾವಳಿ

ಗಂಗೊಳ್ಳಿ: ಅರಾಟೆ ಬಸ್ ಸ್ಟ್ಯಾಂಡ್ ಬಳಿ ಬೈಕ್‌‌ಗೆ ಲಾರಿ ಡಿಕ್ಕಿ; ಬೈಕ್ ಸವಾರ‌ ಮರವಂತೆ ಕೆನರಾ ಬ್ಯಾಂಕ್ ಮ್ಯಾನೇಜರ್ ಮೃತ್ಯು

Pinterest LinkedIn Tumblr

ಕುಂದಾಪುರ: ಬ್ಯಾಂಕ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕೆನರಾ ಬ್ಯಾಂಕಿನ ಮ್ಯಾನೇಜರ್ ಚಲಾಯಿಸುತ್ತಿದ್ದ ಬೈಕಿಗೆ ಲಾರಿ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ನವಿ ಮುಂಬೈ ನಿವಾಸಿ ರಾಹುಲ್ ಬಾಲಕೃಷ್ಣ ರಣಕಂಬೆ ಎಂಬುವರೇ ಅಪಘಾತದಲ್ಲಿ ಸಾವನ್ನಪ್ಪಿದವರು. ರಾಹುಲ್ ಬಾಲಕೃಷ್ಣ ಅವರು ಮರವಂತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದರು.

ಶನಿವಾರ ಸಂಜೆ ಮರವಂತೆಯ ಬ್ಯಾಂಕಿನಲ್ಲಿ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಕುಂದಾಪುರದ ಮನೆ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಅರಾಟೆ ಬಸ್ ನಿಲ್ದಾಣದ ಬಳಿ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ಲಾರಿ ಚಾಲಕ ಅತೀ ವೇಗದಿಂದ ಹಿಂದಕ್ಕೆ ಸಾಗಿ ಬಂದು ಹಿಂಬದಿಯಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಗಂಭೀರ ಗಾಯಗೊಂಡ ರಾಹುಲ್ ಅವರನ್ನು ಗಂಗೊಳ್ಳಿಯ 24*7 ಆಪದ್ಬಾಂಧವ ಅಂಬುಲೆನ್ಸ್ ನ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ತಕ್ಷಣ ಕುಂದಾಪುರದ ಆಸ್ಪತ್ರೆಗೆ ಸಾಗಿಸಿದ್ದು ದಾರಿ ಮಧ್ಯೆ ರಾಹುಲ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಅಪಘಾತ ನಡೆಸಿದ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಸ್ಥಳೀಯರು ಲಾರಿಯನ್ನು ಬೆನ್ನಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಗೊಳ್ಳಿ ಠಾಣೆ ಎಸ್‌ಐ ಹರೀಶ್‌ ಮತ್ತು ಸಿಬ್ಬಂದಿಗಳು ಘಟನೆ ಸ್ಥಳಕ್ಕೆ ಆಗಮಿಸಿದ್ದರು.

Comments are closed.