ಕರಾವಳಿ

ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರಿಗೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಕುಂದಾಪುರದಲ್ಲಿ ಅಭಿಮಾನಿ ಬಳಗದ ಆಗ್ರಹ

Pinterest LinkedIn Tumblr

ಕುಂದಾಪುರ: ಹಿಂದುತ್ವಕ್ಕಾಗಿ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿ, ತನ್ನ ತತ್ವ ಸಿದ್ದಾಂತಕ್ಕೆ ಬದ್ಧರಾಗಿ, ಧೀಮಂತ ನಾಯಕ ಎನಿಸಿಕೊಂಡ ಸತ್ಯಜಿತ್ ಸುರತ್ಕಲ್ ಅವರಲ್ಲಿ ಹಿಂದುತ್ವದ ಶಕ್ತಿಯಿದ್ದು ಅವರಿಗೆ ದ.ಕ ಲೋಕಸಭಾ ಟಿಕೆಟ್ ನೀಡಬೇಕು ಎಂದು ಹಿಂದೂ ಮುಖಂಡ ಅಚ್ಯುತ್ ಕಲ್ಮಾಡಿ ಹೇಳಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್ ಅವರನ್ನು ಆಯ್ಕೆ ಮಾಡಲು ಒತ್ತಾಯಿಸಿ ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಕುಂದಾಪುರ ತಾಲೂಕು ವತಿಯಿಂದ ಕುಂದಾಪುರ ತಾಲೂಕು ಪಂಚಾಯತ್ ಎದುರು ರವಿವಾರ ನಡೆದ ಆಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

ಪ್ತಸ್ತುತ ಕುಲಗೆಟ್ಟಿರುವ, ಸ್ವಾರ್ಥ ತುಂಬಿರುವ ರಾಜಕೀಯ ವ್ಯವಸ್ಥೆಯಿದೆ. ರಾಜಕೀಯದಲ್ಲಿ ಹಿಂದುತ್ವದ ಕಡೆಗೆ ಗಮನಹರಿಸುವ ವ್ಯಕ್ತಿ ಆರಿಸಿ ಬರಬೇಕಿದ್ದು ದೆಹಲಿಯಲ್ಲಿ ವಾಜಪೇಯಿ, ಉತ್ತರಪ್ರದೇಶದಲ್ಲಿ ಯೋಗಿ, ದ.ಕ.ದಲ್ಲಿ ಸತ್ಯಜಿತ್ ಸುರತ್ಕಲ್ ಅವರ ಅನಿವಾರ್ಯತೆಯಿದೆ. ತನ್ನನ್ನು ತಾನು ಸಮರ್ಪಣಾ ಮನೋಭಾವನೆಯಿಂದ ಹಿಂದುತ್ವಕ್ಕಾಗಿ ತೊಡಗಿಸಿಕೊಂಡ ಸುರತ್ಕಲ್ ಅವರಿಗೆ ಬೇರೆಬೇರೆ ಪಕ್ಷ ಟಿಕೆಟ್ ಆಫರ್ ನೀಡಿದ್ದರೂ ಅದನ್ನು ತಿರಸ್ಕರಿಸಿ ಬದ್ಧತೆ ತೋರಿದ್ದಾರೆ. ಸತ್ಯಜಿತ್ ಹಿಂದುತ್ವಕ್ಕಾಗಿ ಮಾಡಿದ ಹೋರಾಟದ ಹಕ್ಕು ನಾವುಗಳು ಕೇಳುವ ಮೂಲಕ ಬಿಜೆಪಿ ಹೈಕಮಾಂಡಿಗೆ ಒತ್ತಾಯ ಮಾಡಬೇಕಿದೆ. ಸತ್ಯಜಿತ್ ಅವರನ್ನು ಕಸಿದು ಕೊಳ್ಳದೆ ಅವರಿಗೆ ಅವಕಾಶ ಮಾಡಿಕೊಡಬೇಕಿದೆ ಎಂದು ಆಗ್ರಹಿಸಿದರು.

ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಕುಂದಾಪುರದ ಪ್ರಮುಖರಾದ ಧನಂಜಯ್ ಕುಂದಾಪುರ ಮಾತನಾಡಿ, ಗಂಗೊಳ್ಳಿ, ಮಲ್ಪೆ ಸಹಿತ ರಾಜ್ಯಾದ್ಯಂತ ಹಿಂದುತ್ವದ ಪರ ಹೋರಾಟಗಳನ್ನು ಮಾಡಿ ಸಂಘಟನೆ ಶಕ್ತಿ ಪ್ರದರ್ಶಿಸಿ ಕಾರ್ಯಕರ್ತರ ನೋವು ನಲಿವುಗಳಿಗೆ ಧ್ವನಿಯಾದ ಸತ್ಯಜಿತ್‌ ಸುರತ್ಕಲ್ ಅವರಿಗೆ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲು ಆಗ್ರಹಿಸಿ ಫೆ.25ರಂದು ಬಂಟ್ವಾಳದ ಬಂಟರ ಭವನದಲ್ಲಿ ರಾಜ್ಯಮಟ್ಟದ ಜನಾಗ್ರಹ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸತ್ಯಜಿತ್ ಸುರತ್ಕಲ್ ಅಭಿಮಾನಿ ಬಳಗ ಕುಂದಾಪುರದ ಪ್ರಮುಖರಾದ ಗಣೇಶ್ ಹೆಗ್ಡೆ ಕುಂದಾಪುರ, ಭಾಸ್ಕರ್ ಶೆಟ್ಟಿ ಸಿದ್ದಾಪುರ, ರಾಜೇಶ್ ಕೋಟೇಶ್ವರ ವೇದಿಕೆಯಲ್ಲಿದ್ದರು.

Comments are closed.