ಕರಾವಳಿ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಂತಾರ 2 ಚಿತ್ರದ ಫಸ್ಟ್ ಲುಕ್ ರಿಲೀಸ್

Pinterest LinkedIn Tumblr

ಕುಂದಾಪುರ: ಕಾಂತಾರದ ಅಧ್ಯಾಯ ಒಂದನ್ನು ಆರಂಭಿಸಿದ್ದು. ಮುಂದುವರಿದ ಪಯಣ. ಕಾಂತಾರ ಸಿನೆಮಾಕ್ಕೆ ಮುನ್ನುಡಿಯನ್ನು ಹೇಳಲಿಕ್ಕೆ ಹೊರಟಿದ್ದೇನೆ. ಅದ್ಭುತವಾದ ಚಿತ್ರ ನೀಡಲು ಇಡೀ ಚಿತ್ರ ತಂಡ ಕೆಲಸ ಮಾಡಲಿದೆ. ಹೊಂಬಾಳೆ ಫಿಲ್ಮ ಸಂಸ್ಥೆಯವರು ನಂಬಿದಂತಹ ಕ್ಷೇತ್ರ ಆನೆಗುಡ್ಡೆ, ನನಗಂತೂ ಆನೆಗುಡ್ಡೆ ಅದೃಷ್ಟದ ಬಾಗಿಲು. ಕಳೆದ ಬಾರಿ ಕಾಂತಾರಕ್ಕೂ ಇಲ್ಲಿಯೇ ಮುಹೂರ್ತ ಮಾಡಿದ್ದೀವಿ, ಅದೇ ರೀತಿ ಈ ಬಾರಿಯೂ ಆನೆಗುಡ್ಡೆಯ ಗಣಪತಿ ಆಶೀರ್ವಾದದೊಂದಿಗೆ ಪ್ರಾರಂಭ ಮಾಡಿದ್ದೇವೆ ಎಂದು ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.

ತಾಲ್ಲೂಕಿನ ಕುಂಭಾಸಿಯ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ನಡೆದ ಕಾಂತಾರ-2 ಚಲನಚಿತ್ರದ ಮುಹೂರ್ತ ಹಾಗೂ ಕ್ಲಾಪ್ ಬೋರ್ಡ್ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಮಾತಿಗಿಂತ ಕೃತಿಯೇ ಮುಖ್ಯ ಎನ್ನೋದರಲ್ಲಿ ನಂಬಿಕೆ ಇರೋವವನು ನಾನು, ಹಾಗಾಗಿ ಸಿನೀಮಾ ಬಗ್ಗೆ ಈಗಲೇ ಏನು ಹೇಳೋದಿಲ್ಲ. ಈಗಾಗಲೇ ಬಿಟ್ಟಿರುವ ಪೋಸ್ಟರ್ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡುತ್ತದೆ. ಹೋಗತ್ತಾ, ಹೋಗತ್ತಾ ಸಿನೀಮಾವೇ ಮಾತನಾಡಿದರೇ ಚಂದ ಎಂದ ಅವರು ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭ ಮಾಡಲಿಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಕರಾವಳಿಯ ಈ ಭಾಗಕ್ಕೆ ಸಂಬಂಧಿಸಿದ ಕಥೆಯಾಗಿರುವುದರಿಂದ ಬಹುತೇಕ ಈ ಭಾಗದಲ್ಲಿ ಚಿತ್ರೀಕರಣ ಆಗುವ ಸಾಧ್ಯತೆಗಳಿವೆ. ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದೆ. ಕನ್ನಡಿಗರೇ ಕಾಂತಾರವನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರಿಂದಾಗಿ, ಕನ್ನಡದ ಕಲಾವಿದರಿಗೆ ಪ್ರಥಮ ಆದ್ಯತೆ. ಹಿಂದಿನಂತೆ ಸ್ಥಳೀಯರ ಜೊತೆ, ನಾಡಿನ ಇತರ ಭಾಗದ ಹೊಸ ಪ್ರತಿಭೆಗಳನ್ನು ಪರಿಗಣಿಸುವ ಯೋಚನೆ ಇದೆ. ಹೊಂಬಾಳೆ ಸಂಸ್ಥೆ ಹಾಗೂ ವಿಜಯ್ ಕಿರಗಂದೂರು ಅವರ ಕಾರಣದಿಂದಲೇ ಕಾಂತಾರ ಸಿನೀಮಾ ಇಷ್ಟೊಂದು ದೊಡ್ಡ ಮಟ್ಟಕ್ಕೆ ಹೋಗಿದೆ. ಬಹುತೇಕ ಕಾಂತಾರ ಚಿತ್ರದ ತಾಂತ್ರಿಕ ತಂಡವೇ ಮುಂದುವರೆಯಲಿದೆ. ತುಂಬಾ ದೊಡ್ಡ ಜವಾಬ್ದಾರಿ ಇದೆ, ನೀವು ಹೇಗೆ ಹಿಂದಿನ ನನ್ನ ಚಿತ್ರಗಳಿಗೆ ಹರಸಿ , ಹಾರೈಸಿದ್ದೀರಿ ಇದಕ್ಕೂ ಅದೇ ರೀತಿಯ ಹಾರೈಕೆ ನೀಡಿ ಎಂದು ಮನವಿ ಮಾಡಿದರು.

ಕಾಂತಾರ-2 ಚಿತ್ರಕ್ಕೆ ಮುಹೂರ್ತ:
ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕ್ಲಾಪ್ ಬೋರ್ಡ್ ಮಾಡಿದರು, ರಿಷಬ್ ಅವರ ಪುತ್ರಿ ರಾಧ್ಯಾ ರಿಷಬ್ ಶೆಟ್ಟಿ, ಕ್ಯಾಮರಾ ಸ್ವೀಚ್‌ಗೆ ಚಾಲನೆ ನೀಡಿದರು. ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು, ಚಲುವೇ ಗೌಡ, ಸಹ ಲೇಖಕರಾದ ಅನಿರುದ್ಧ್ ಮಹೇಶ್, ಶನಿಲ್ ಗುರು, ಛಾಯಾಗ್ರಹಣ ನಿರ್ದೇಶಕ ಅರವಿಂದ್ ಎಸ್ ಕಶ್ಯಪ್, ಸಂಗೀತ ಹಾಗೂ ಹಿನ್ನೆಲೆ ಸಂಗೀತ ನಿರ್ದೇಶಕರಾದ ಬಿ.ಅಜನೀಶ್ ಲೋಕನಾಥ್ ಹಾಗೂ ಬೊಬಿ, ಪೋಸ್ಟರ್ ಡಿಸೈನರ್ ಬೆಂಗಳೂರಿನ ಕಾಣೆ ಸ್ಟುಡಿಯೋದ ಸಂತೋಷ್ ಬಳ್ಕೂರ್, ಪ್ರೊಡಕ್ಷನ್ ಡಿಸೈನರ್ ಬಾಂಗ್ಲಾನ್, ಕಾಸ್ಟೂಮ್ ಡಿಸೈನರ್ ಪ್ರಗತಿ ಶೆಟ್ಟಿ, ನಟರಾದ ವಿನಯ್ ಬಿದ್ದಪ್ಪ, ಶೈನ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಪ್ರದೀಪ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಸನ್ನಕುಮಾರ ಶೆಟ್ಟಿ ಕೆರಾಡಿ, ದಿವ್ಯಾಧರ ಶೆಟ್ಟಿ ಮೂಡಗಲ್ಲು, ಪ್ರೊಡಕ್ಷನ್ ವ್ಯವಸ್ಥಾಪಕ ಗಗನಮೂರ್ತಿ, ಸುಹಾಸ್ ಶೆಟ್ಟಿ, ಉದ್ಯಮಿಗಳಾದ ಬೈಲೂರು ಉದಯ್‌ಕುಮಾರ ಶೆಟ್ಟಿ, ವಿನಯ್‌ಕುಮಾರ ಶೆಟ್ಟಿ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಶ್ರೀರಮಣ ಉಪಾಧ್ಯಾಯ, ಮಾಜಿ ಹಿರಿಯ ಮೊಕ್ತೇಸರ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಶ್ರೀಷ ಉಪಾಧ್ಯಾಯ ಇದ್ದರು.

ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವತಿಯಿಂದ ನಟ ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕರಾದ ಹೊಂಬಾಳೆ ಫಿಲ್ಮನ ವಿಜಯ್ ಕಿರಗಂದೂರು ಅವರನ್ನು ಗೌರವಿಸಲಾಯಿತು.

Comments are closed.