ಕುಂದಾಪುರ: ಜವಬ್ದಾರಿಯುತ ಇಲಾಖೆಯಾಗಿರುವ ಮೆಸ್ಕಾಂ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಮುಂಚೂಣಿ ಕೆಲಸ ಮಾಡಬೇಕು. ನಿಧಾನಗತಿ ಕೆಲಸದಿಂದ ಒಂದೊಮ್ಮೆ ಅನಾಹುತ ಸಂಭವಿಸಿದರೆ ಹೊಣೆ ಯಾರು?. ಪ್ರತಿ ಸಭೆಯಲ್ಲಿ ಹಲವು ದೂರುಗಳನ್ನು ನೀಡಿದರೂ ಕೂಡ ಪ್ರಗತಿ ಶೂನ್ಯ. ಸಮಸ್ಯೆ ಬಗೆಹರಿದಿಲ್ಲ ಎಂದು ದಲಿತ ಮುಖಂಡ ರಾಜು ಬೆಟ್ಟಿನಮನೆ ಆರೋಪಿಸಿದರು.
ಗೋಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಶನಿವಾರ ನಡೆದ 2023-24ನೇ ಸಾಲಿನ ಗೋಪಾಡಿ ಗ್ರಾ.ಪಂ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಭಾಗವಹಿಸಿ ಮೆಸ್ಕಾಂ ಇಲಾಖೆ ಬಗ್ಗೆ ದೂರಿದರು.
ಹಳೆ ಮನೆಯಿದ್ದು, ಅದನ್ನು ತೆರವು ಮಾಡಿ ಹೊಸ ಮನೆ ಕಟ್ಟಿಕೊಳ್ಳಲು ಹೊಸ ಆರ್.ಆರ್ ಸಂಖ್ಯೆ ಬೇಕು ಎಂಬುದು ಇಲಾಖಾ ನಿಯಮಾವಳಿ ಎಂದು ಅಧಿಕಾರಿ ಹೇಳಿದ್ದಕ್ಕೆ ಸಂಬಂದಪಟ್ಟ ಮನೆ ಮಹಿಳೆ ಆಕ್ಷೇಪಿಸಿದ್ದು ಇದೇ ರೀತಿ ಹಲವು ಸಮಸ್ಯೆಗಳಿದೆ. ಬಡ ಜನರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಿ ಎಂದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಸಭೆಯಲ್ಲಿನ ಚರ್ಚೆ ಬಗ್ಗೆ ವರದಿ ಸಲ್ಲಿಸುತ್ತೇನೆ ಎಂದು ಮೆಸ್ಕಾಂ ಜೆಇ ಸಭೆಗೆ ತಿಳಿಸಿದರು. ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ವಿದ್ಯುತ್ ಸಂಪರ್ಕ ತಂತಿಗೆ ಹೊಂದಿಕೊಂಡಂತಿದ್ದ ಮರದ ಗೆಲ್ಲು ಕಡಿಯಲು ಸಿಬ್ಬಂದಿ ಹಣ ಬೇಡಿಕೆ ಇಟ್ಟ ಬಗ್ಗೆ ದ.ಸಂ.ಸ ಮುಖಂಡ ರಾಜು ಬೆಟ್ಟಿನಮನೆ ಗಂಭೀರ ಆರೋಪ ಮಾಡಿದ್ದು ಈ ಬಗ್ಗೆ ದೂರು ನೀಡಿದರೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಜೆಇ ತಿಳಿಸಿದರು.
ಗ್ರಾಮಪಂಚಾಯತಿ ಹಾಗೂ ಯಾವುದೇ ಇಲಾಖೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಆದರೆ ಬೀದಿ ದೀಪ, ವಾಲಿಕೊಂಡಿರುವ ವಿದ್ಯುತ್ ಕಂಬಗಳನ್ನು ಸುವ್ಯವಸ್ಥಿತಗೊಳಿಸುವ ಬಗ್ಗೆ ಹಲವು ಬಾರಿ ದೂರು ನೀಡಲಾಗಿದೆ. ಇಲಾಖೆ ಬೇಜವಬ್ದಾರಿಗೆ ಜನರು ಸಂಬಂಧಿತ ವಾರ್ಡ್ ಸದಸ್ಯರನ್ನು ದೂರುತ್ತಾರೆ. ಕೂಡಲೇ ಈ ಬಗ್ಗೆ ಸ್ಪಂದಿಸಿ ಎಂದು ಗ್ರಾ.ಪಂ ಸದಸ್ಯರಾದ ಗಿರೀಶ್ ಉಪಾಧ್ಯ, ಪ್ರಕಾಶ್ ಮೊಗವೀರ ಆಗ್ರಹಿಸಿದರು.
ವಕ್ವಾಡಿ ರಸ್ತೆಯಲ್ಲಿರುವ ಬಾಲಕಿಯರ ವಸತಿ ಗೃಹದ ಬಳಿ ಕಿಡಿಗೇಡಿಗಳು ಕಾನೂನುಬಾಹಿರ ಚಟುವಟಿಕೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಪೊಲೀಸರ ಬಳಿ ಗ್ರಾಮಸ್ಥರು ಮನವಿ ಮಾಡಿದರು. ಈ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಕುಂದಾಪುರ ಠಾಣೆ ಸಹಾಯಕ ಉಪನಿರೀಕ್ಷಕ ಅಶೋಕ್ ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆ ಸಂಹೋಜಕ ಸಂತೋಷ್ ಕುಮಾರ್ ನೋಡಲ್ ಅಧಿಕಾರಿಯಾಗಿದ್ದರು. ಗೋಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಉಪಾಧ್ಯಕ್ಷೆ ಶಾಂತಾ, ಸದಸ್ಯರುಗಳಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾ.ಪಂ ಪಿಡಿಒ ಗಣೇಶ್ ನಿರೂಪಿಸಿದರು.
ಗೋಪಾಡಿ ಪಡುಚಾವಡಿಬೆಟ್ಟು ಅಂಬೇಡ್ಕರ್ ಭವನ ವಿಚಾರ ಪ್ರಸ್ತಾಪ
ಸಭೆಯಲ್ಲಿ ಕುಂದಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಮಾತನಾಡುತ್ತಾ, ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮೂಲಸೌಕರ್ಯ ವಿಚಾರದ ಬಗ್ಗೆ ವರದಿಯಾಗಿದ್ದು ಸ್ಥಳ ಪರಿಶೀಲನೆ ಮಾಡಲಾಗಿದೆ. ಸರಿಯಾದ ನಿರ್ವಹಣೆಯಾಗಿಲ್ಲ, ಭವನ ಉಪಯೋಗವಾಗಿಲ್ಲ ಎಂದರು. ಇದಕ್ಕೆ ದಸಂಸ ಮುಖಂಡ ರಾಜು ಬೆಟ್ಟಿನಮನೆ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ 7-8 ಸೆಂಟ್ಸ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾದ ಉದಾಹರಣೆಗಳಿಲ್ಲ. ಯಾವುದೋ ದುರುದ್ದೇಶಕ್ಕೆ ಆ ಸ್ಥಳದಲ್ಲಿ ಭವನ ನಿರ್ಮಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಒಂದೇ ಮನೆಗಾಗಿ ರಸ್ತೆ ನಿರ್ಮಿಸಲಾಗಿದೆ. ಈ ಬಗ್ಗೆ ಸೂಕ್ಗ ತನಿಖೆಗೆ ಆದೇಶಿಸಲಾಗಿದೆ. ಈ ಹಿಂದಿನ ಗ್ರಾಮಸಭೆಯಲ್ಲೂ ಪ್ರಸ್ತಾಪಿಸಲಾಗಿದೆ. ಎಸ್ಸಿ-ಎಸ್ಟಿ ಅನುದಾನ ದುರ್ಬಳಕೆಯಾಗುವುದಕ್ಕೆ ಇದೆಲ್ಲಾ ಜ್ವಲಂತ ಸಾಕ್ಷಿ ಎಂದರು. ಇದಕ್ಕೆ ಅಧಿಕಾರಿ ಪ್ರತಿಕ್ರಿಯೆ ನೀಡಿ, ಸ್ಥಳೀಯರ ವಿರೋಧ ಹಿನ್ನೆಲೆ ಭವನಕ್ಕೆ ಗ್ರಾ.ಪಂ.ನ 25% ನಿಧಿಯಿಂದ ಹಣ ಬಿಡುಗಡೆ ಮಾಡಿಲ್ಲ ಎಂದು ಪಿಡಿಒ ಹೇಳಿದ್ದಾರೆ. ಶೀಘ್ರವೇ ಸಮಿತಿ ಸಭೆ ಕರೆದು ಎಲ್ಲರಲ್ಲೂ ಒಮ್ಮತ ಮೂಡಿಸಿ ಅಂಬೇಡ್ಕರ್ ಭವನ ಸದ್ಬಳಕೆಯಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.
Comments are closed.