ಕರಾವಳಿ

ಪಾನಮತ್ತ ಚಾಲಕನ ಎಡವಟ್ಟು | ಕುಂದಾಪುರ ಸಂಗಮ್ ಬಳಿ ಡಿವೈಡರ್ ಹಾರಿ ಪಲ್ಟಿಯಾದ ಸಿಮೆಂಟ್ ತುಂಬಿದ್ದ ಲಾರಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಬೈಂದೂರು ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಬೃಹತ್ ಗಾತ್ರದ ಲಾರಿ ಡಿವೈಡರ್ ಹಾರಿ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡಾಲಾಗಿ ಬಿದ್ದ ಘಟನೆ ಕುಂದಾಪುರದ ಸಂಗಮ್ ಜಂಕ್ಷನ್ ಬಳಿ ಭಾನುವಾರ ಸಂಜೆ ನಡೆದಿದೆ.

ಕೊಪ್ಪಳದಿಂದ ಮಂಗಳೂರಿಗೆ ಸಾಗುತ್ತಿದ್ದ ಸಿಮೆಂಟ್ ಲೋಡ್ ತುಂಬಿದ 14 ಚಕ್ರದ ಬೃಹತ್ ಲಾರಿ ಇದಾಗಿದ್ದು ಚಾಲಕ ಪಾನಮತ್ತನಾಗಿ ಲಾರಿ ಚಲಾಯಿಸಿದ್ದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ತಪ್ಪಿದ ದುರಂತ: ಸಂಗಮ್ ಜಂಕ್ಷನ್ ಸಮೀಪ ವಾಹನ ದಟ್ಟಣೆ ಹೆಚ್ಚು. ಬೈಂದೂರು ಕಡೆಯಿಂದ ಪಾನಮತ್ತ ಚಾಲಕ ಲಾರಿಯನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದಿದ್ದ. ಸಂಗಮ್ ಬಳಿ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡಿದ್ದು ಹೆದ್ದಾರಿ ಬಲಭಾಗದ ಡಿವೈಡರ್ ಹಾರಿ ಲಾರಿ ಉರುಳಿದೆ. ಈ ವೇಳೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗಿ ಬರುತ್ತಿದ್ದ ಕಾರೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಭಾರೀ ಅನಾಹುತ ತಪ್ಪಿದೆ. ಲಾರಿ ಪಲ್ಟಿಯಾಗುವ ಮೊದಲು ಕುಂದಾಪುರದ ಸೈನ್ ಸೆಕ್ಯೂರಿಟಿಯವರು ಜಂಕ್ಷನ್ ನಲ್ಲಿ ಅಳವಡಿಸಿದ ಸಿಸಿ ಟಿವಿ ಕ್ಯಾಮೆರಾಗಳಿಗೆ ಡಿಕ್ಕಿ ಹೊಡೆದಿದ್ದು ಹಾನಿಯುಂಟಾಗಿದೆ. ಪೊಲೀಸರು ಚಾಲಕ ನಿರ್ವಾಹಕನನ್ನು ವಶಕ್ಕೆ ಪಡೆದಿದ್ದಾರೆ.

ಹೆದ್ದಾರಿ ಮೇಲೆ ಲಾರಿ ಉರುಳಿದ್ದರಿಂದ ಕುಂದಾಪುರ ಬೈಂದೂರು ಸಂಪರ್ಕ ರಸ್ತೆ ಜಾಮ್ ಆಗಿತ್ತು. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ಸರ್ವೀಸ್ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಟ್ಟರು. ಸಂಗಮ್ ಫ್ರೆಂಡ್ಸ್ ಸದಸ್ಯರು ಪೊಲೀಸರಿಗೆ ಸಹಕಾರ ನೀಡಿದರು. ಮೂರ್ನಾಲ್ಕು ಕ್ರೇನ್ ಗಳ ಸಹಾಯದಿಂದ ರಾತ್ರಿ 8 ಗಂಟೆ ಬಳಿಕ ಲಾರಿ ತೆರವುಗೊಳಿಸಲಾಯಿತು.

Comments are closed.