ಕರಾವಳಿ

98 ವರ್ಷದ ವೃದ್ಧೆಯ ಆರೈಕೆಗೆ ಬಂದು ಚಿನ್ನದ ಸರ ಕಳವು ಮಾಡಿದ್ದ ಹೋಂ ನರ್ಸ್ ಬಂಧನ..!

Pinterest LinkedIn Tumblr

ಉಡುಪಿ: ಆತ್ರಾಡಿ, ಮದಗದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ 1.45 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಳವು ಮಾಡಿಕೊಂಡು ಪರಾರಿಯಾಗಿದ್ದ ಹೋಂ ನರ್ಸ್‌ ಓರ್ವಳನ್ನು ಪೊಲೀಸರು ಬಂಧಿಸಿದ್ದಾರೆ.

ಮದಗದ ಚೆನ್ನಿಬೆಟ್ಟು ನಿವಾಸಿ ವಸಂತ ಶೆಟ್ಟಿ ಅವರು ತಮ್ಮ 98 ವರ್ಷದ ತಾಯಿ ಸರಸ್ವತಿ ಅವರ ಆರೈಕೆ ಮಾಡಿ ನೋಡಿಕೊಳ್ಳಲು ಉಡುಪಿಯ ಜಾಬ್‌ ಲಿಂಕ್ಸ್‌ ಏಜೆನ್ಸಿ ಮುಖಾಂತರ ರೇಖಾ ಹೆಬ್ಬಾಳ್ಳಿಯನ್ನು ಹೋಂ ನರ್ಸ್‌ ಆಗಿ ನೇಮಿಸಿದ್ದರು.

ಅ. 20ರಿಂದ ರೇಖಾ ಹೆಬ್ಬಾಳ್ಳಿ, ಸರಸ್ವತಿ ಅವರ ಆರೈಕೆ ಮಾಡುತ್ತಿದ್ದರು. ನ. 21ರಂದು ಸಂಜೆ ಸರಸ್ವತಿ ಅವರ ಸರವನ್ನು ಕಳವು ಮಾಡಿ ಯಾರಿಗೂ ಹೇಳದೆ ಮನೆಯಿಂದ ಪರಾರಿಯಾಗಿದ್ದಳು. ನ. 24ರಂದು ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪುತ್ರ ವಸಂತ ಶೆಟ್ಟಿ ಅವರು ದೂರು ದಾಖಲಿಸಿದ್ದು, ತನಿಖೆ ನಡೆಸಿದ ಪೊಲೀಸರು ಅದೇ ದಿನ ಉಡುಪಿಯಲ್ಲಿ ರೇಖಾಳನ್ನು ಬಂಧಿಸಿದ್ದು, ಕಳವು ಮಾಡಿದ ಸರವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿ ಎಸ್‌ಪಿ ಅಕ್ಷಯ ಎಂ.ಎಚ್., ಹೆಚ್ಚುವರಿ ಎಸ್‌ಪಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸುಧಾಕರ್‌ ನಾಯ್ಕ, ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್‌ ಠಾಣೆ ಪಿಎಸ್‌ಐ ಅನಿಲ್‌ ಬಿ.ಎಂ., ಸಿಬಂದಿ ಎಎಸ್‌ಐ ಜಯಂತ, ಸುಂದರ್‌, ಎಚ್‌.ಸಿ. ದಯಾನಂದ ಪ್ರಭು, ರಘು, ರಾಘವೇಂದ್ರ, ಕಾಮತ್‌, ಪಿ.ಸಿ. ಆದರ್ಶ್‌, ಭೀಮಪ್ಪ, ನಿತಿನ್‌, ನಬಿ, ಕಾರ್ತಿಕ್‌, ರಾಜೇಶ್ವರಿ, ಸುರೇಖಾ, ಜ್ಯೋತಿ ನಾಗರತ್ನಾ, ಸುಮಲತಾ, ಜಯಲಕ್ಷ್ಮೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಅಲ್ಲದೆ ಹೋಂ ನರ್ಸಿಂಗ್ ಏಜೆನ್ಸಿಗಳು ಕೆಲಸಕ್ಕೆ ನೇಮಿಸುವರ ಬಗ್ಗೆ ಯಾವುದೇ ಪೂರ್ವಪರ ಮಾಹಿತಿಯನ್ನು ಪಡೆಯದೇ ನಿರ್ಲಕ್ಷ್ಯತನದಿಂದ ನೇಮಿಸುವುರಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 

Comments are closed.