ಕರಾವಳಿ

ಕ್ರಿಮಿನಲ್ ಚಟುವಟಿಕೆ, ಶಾಂತಿಭಂಗ ಕೃತ್ಯ ಮಾಡುತ್ತಿದ್ದ ಗಂಗೊಳ್ಳಿಯ ಸುಭಾನ್ 6 ತಿಂಗಳು ಗಡಿಪಾರು..!

Pinterest LinkedIn Tumblr

ಉಡುಪಿ: ಜಿಲ್ಲೆಯ ಗಂಗೊಳ್ಳಿ ಗ್ರಾಮದ ಮೀನು ಮಾರ್ಕೆಟ್‌ ಬಳಿಯ ಜಾಮಿಯಾ ಮೊಹಲ್ಲಾ ನಿವಾಸಿ ಮೊಹಮ್ಮದ್‌ ಸುಭಾನ್‌ (25) ಎಂಬಾತನನ್ನು ಉಪವಿಭಾಗ ದಂಡಾಧಿಕಾರಿಯವರು 6 ತಿಂಗಳ ಕಾಲ ಚಳ್ಳಕೆರೆ ಉಪವಿಭಾಗಕ್ಕೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

6 ತಿಂಗಳ ಒಳಗೆ ಅನುಮತಿ ಪಡೆಯದೆ ಕುಂದಾಪುರ ಪೊಲೀಸ್‌ ಉಪವಿಭಾಗದಲ್ಲಿ ಕಂಡು ಬಂದಲ್ಲಿ ಈತನನ್ನು ಬಂಧಿಸುವಂತೆ ಗಂಗೊಳ್ಳಿ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕರಿಗೆ ಆದೇಶಿಸಲಾಗಿದೆ.

ಈತನು ರೌಡಿಯಾಗಿದ್ದು ಹಲವಾರು ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 20ನೇ ವಯಸ್ಸಿನಲ್ಲಿಯೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಲು ಪ್ರಾರಂಭಿಸಿದ್ದು ತನ್ನ ಸಹಚರರೊಂದಿಗೆ ಸೇರಿ ತಂಡ ಕಟ್ಟಿಕೊಂಡು, ಹೊಡೆದಾಟ, ದನ ಕಳ್ಳತನ, ಜಾನುವಾರು ಸಾಗಾಟ ಮತ್ತು ಹಿಂಸೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಕಳೆದ 5 ವರ್ಷಗಳಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು ಹಲವು ಕಾನೂನು ಕ್ರಮ ಜರುಗಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಬಂಧಿಸಲ್ಪಟ್ಟಿದ್ದರೂ ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಿಲ್ಲ. ಗಂಗೊಳ್ಳಿ ಠಾಣೆಯಲ್ಲಿ 5 ಪ್ರಕರಣಗಳು ದಾಖಲಾಗಿವೆ.

ಜಾಮೀನು ಪಡೆದು ಹೊರ ಬಂದ ನಂತರವೂ ಪುನಃ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ. ಈ ನಿಟ್ಟಿನಲ್ಲಿ ಪೊಲೀಸ್‌ ಅಧಿಕಾರಿಗಳ ಸೂಚನೆಯಂತೆ ಪಿಎಸ್‌ಐ ಅವರು ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದ ವರದಿಯಂತೆ ಗಡಿಪಾರು ಆದೇಶವಾಗಿದೆ.

Comments are closed.