ಕರಾವಳಿ

ವೈಯಕ್ತಿಕ ಹಗೆತನದ ರಾಜಕೀಯ ಮಾಡುವ ಸಂಸ್ಕೃತಿ ಮುಳುಗುವ ಕೊನೆ ಘಳಿಗೆಯಲ್ಲಿ ಬರುತ್ತದೆ: ವೀರಪ್ಪ ಮೊಯಿಲಿ

Pinterest LinkedIn Tumblr

ಕುಂದಾಪುರ: ರಾಜಕೀಯದಲ್ಲಿ ವೈಯಕ್ತಿಕವಾದ ಹಗೆತನ ಕರ್ನಾಟಕದಲ್ಲಿ ಇದೇ ಮೊದಲು. ಕೀಳು ಮಟ್ಟದ ರಾಜಕೀಯ ಮಾಡುವ ಇಂತಹ ಹಗೆತನದ ಸಂಸ್ಕೃತಿ ಮುಳುಗುವ ಕೊನೆ ಘಳಿಗೆಯಲ್ಲಿ ಬರುತ್ತದೆ. ಹಾಗಾಗಿ ಹತಾಶರಾಗಿ ಬಿಜೆಪಿ ಈ ಕೆಲಸ ಮಾಡಿದೆ. ಮತ್ತವರು ಚುನಾವಣೆಯಲ್ಲಿ ಗೆದ್ದು ಬರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಹೇಳಿದರು.

ಇತ್ತೀಚೆಗೆ ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ಪ್ರಕರಣದ ಕುರಿತು ಅವರು ಕುಂದಾಪುರದ ಕಟ್’ಬೆಲ್ತೂರಿನಲ್ಲಿ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ಸಿಗರೆ ಮೊಟ್ಟೆ ಒಡೆಸಿದ್ದಾರೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ತಮಾಷೆಯ ಹೇಳಿಕೆ. ಬಿಜೆಪಿ ಹಾಗೂ ಸಂಘಪರಿವಾರದ ಪರ ಘೋಷಣೆ ಕೂಗುತ್ತಾ ಮೊಟ್ಟೆ ಎಸೆದಿದ್ದನ್ನು ಜನರು ಪ್ರತ್ಯಕ್ಷವಾಗಿ ನೋಡಿದ್ದಾರೆ. ಸುಳ್ಳು ಹೇಳಲು ಒಂದು ಮಿತಿ ಇರಬೇಕು. ಪ್ರಧಾನಿ, ಬಿಜೆಪಿ ರಾಜ್ಯ ನಾಯಕರು ಸಹಿತ ಕಾರ್ಯಕರ್ತರಿಗೆ ಸುಳ್ಳು ಹೇಳುವುದೇ ಕಸುಬಾಗಿದೆ ಎಂದವರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಇಡೀ ದೇಶದಲ್ಲಿ, ಕರ್ನಾಟಕದಲ್ಲಿ ಜನರಿಗೆ ಜೀವ ಬೆದರಿಕೆಯಿದೆ ಹಾಗೂ ಆತಂಕವಿದ್ದು ಸಮಾಧಾನವಿಲ್ಲ. 2014 ರ ನಂತರ ಈ ರೀತಿಯಾದ ಗೊಂದಲವಿದೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಕೆಲಸ ನಡೆಯುತ್ತಿದೆ. ಹಿಂದೆ ಗುಜರಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಅತಂತ್ರತೆ ಇದ್ದಾಗ ಅಂದು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಎಚ್ಚೆತ್ತುಕೊಂಡು ರಾಜಧರ್ಮ ಪಾಲಿಸುವ ಸಲುವಾಗಿ ಅಲ್ಲಿನ ಸಿಎಂ ಆಗಿದ್ದ ಮೋದಿ ಅವರನ್ನು ಪದಚ್ಯುತಿ ಮಾಡಲು ನಿರ್ಧರಿಸಿದಾಗ, ಗೃಹಮಂತ್ರಿಯಾಗಿದ್ದ ಎಲ್.ಕೆ. ಅಡ್ವಾಣಿ ಮೋದಿ ಅವರನ್ನು ರಕ್ಷಿಸಿದರು. ಸಿಎಂ ಆಗಿ ಮುಂದುವರೆದ ಮೋದಿ, ನಂತರ ಪ್ರಧಾನಿ ಆದರು. ಅಂದು ರಾಜಧರ್ಮ ಅವರು ಉಲ್ಲಂಘಿಸಿದ್ದು ಇಂದೂ ದಿನನಿತ್ಯ ಹೆಚ್ಚಾಗುತ್ತಿದೆ. ಜನರಿಗೆ ಕ್ಷೇಮ, ನೆಮ್ಮದಿ ಇಲ್ಲ. ಬೆಲೆ ಏರಿಕೆ ಹೆಚ್ಚಾಗಿದೆ. ಉದ್ಯೋಗವಿಲ್ಲ. ಕೇಂದ್ರ, ರಾಜ್ಯ ಸರ್ಕಾರದ ಉದ್ಯೋಗ ತುಂಬಿಸುತ್ತಿಲ್ಲ. ಸರ್ಕಾರದ ಉದ್ಯೋಗದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಪೆಟ್ರೋಲ್, ಡಿಸೇಲ್ ಆಧಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ನಿರ್ಧರಿತವಾಗುತ್ತದೆ. ನಾನು ಪೆಟ್ರೋಲಿಯಂ ಖಾತೆ ನಿರ್ವಹಿಸಿದ್ದು, ಆಗ ಸಿಲಿಂಡರ್ 300 ರಿಂದ 400ರೂ. ಗೆ ಸಿಗುತ್ತಿದ್ದು ಈಗ 1000 ಮೇಲೆ ಹೋಗಿದೆ. ಅಂದು ಕಚ್ಚಾತಲೇದ ಆಮಧು ಬೆಲೆ ಹೆಚ್ಚಾದರೂ ಅದರ ಭಾರ ಗ್ರಾಹಕರಿಗೆ ಬೀಳದ ಹಾಗೆ ಸರ್ಕಾರದಿಂದ ಸಬ್ಸಿಡಿ ಕೊಡುತ್ತಿದ್ದೆವು. ಈಗ ಜನ ಏನಾದರೂ ಆಗಲಿ ನಾವು ಅಧಿಕಾರ ನಿರ್ವಹಿಸುತ್ತೇವೆ ಎಂದು ಬಿಜೆಪಿ ವರ್ತಿಸುತ್ತಿದೆ ಎಂದು ಟೀಕಿಸಿದ್ದಾರೆ.

ಈ ಸಂದರ್ಭ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

 

Comments are closed.