ಬೆಂಗಳೂರು: ರಾಜ್ಯದಲ್ಲಿ ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಮಾದರಿಯ ನಿಯಮವನ್ನು ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದು ಜುಲೈ 28ಕ್ಕೆ 3 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂಪುಟ ಸಹೋದ್ಯೋಗಿಗಳ ಜೊತೆಗೆ ಸುದ್ದಿಗೋಷ್ಟಿಯನ್ನು ನಡೆಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಬಗ್ಗೆ ಮಾತನಾಡಿದ ಅವರು, ಕೋಮುಸೌಹಾರ್ದ ಕದಡುವ ಶಕ್ತಿಗಳಿಗೆ ಕಡಿವಾಣ ಹಾಕುವುದರಲ್ಲಿ ಹಿಂದೇಟು ಹಾಕುವುದಿಲ್ಲ, ಕಳೆದ 10 ವರ್ಷಗಳಲ್ಲಿ ವಿಧ್ವಂಸಕ ಶಕ್ತಿಗಳು ಹೆಚ್ಚಾಗಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ ಮೂಲಕ ದೇಶದ್ರೋಹಿಗಳನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೇವೆ, ಪ್ರವೀಣ್ ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ.ರಾಜ್ಯದ ಜನರು ಸಂಯಮದಿಂದ ವರ್ತಿಸಬೇಕು ಎಂದರು.
ಅಗತ್ಯ ಬಿದ್ದರೆ ರಾಜ್ಯದಲ್ಲಿ ಉತ್ತರ ಪ್ರದೇಶದ ಯೋಗಿ ಮಾದರಿ ನಿಯಮವನ್ನು ಜಾರಿಗೆ ತರುತ್ತೇವೆ. ಗಲಭೆ ಸೃಷ್ಟಿಸಲೆಂದೇ ಸಂಘಟನೆಗಳು ಹುಟ್ಟಿಕೊಂಡಿವೆ. ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹಂತಕರ ಪತ್ತೆಗೆ ಐದು ತಂಡ ರಚನೆ ಮಾಡಲಾಗಿದ್ದು, ಕೇರಳಕ್ಕೂ ಹೋಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜಿ ಇಲ್ಲ ಎಂದರು.
Comments are closed.