ಕರ್ನಾಟಕ

ರಕ್ಷಿತ್ ಶೆಟ್ಟಿ ಚಾರ್ಲಿಯೊಂದಿಗೆ ಬೈಕ್‍ನಲ್ಲಿ ಕುಳಿತು ಗ್ರ್ಯಾಂಡ್ ಎಂಟ್ರಿ : `777 ಚಾರ್ಲಿ’ ಜು. 29ರಿಂದ ವೂಟ್ ಸೆಲೆಕ್ಟ್’ನಲ್ಲಿ..!

Pinterest LinkedIn Tumblr

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರೆಸ್ ಲಾಂಚ್ ಸಮಾರಂಭದಲ್ಲಿ, ನಟ ರಕ್ಷಿತ್ ಶೆಟ್ಟಿ ಅವರು ಪಪ್-ಸ್ಟಾರ್ ಚಾರ್ಲಿಯೊಂದಿಗೆ ಬೈಕ್‍ನಲ್ಲಿ ಕುಳಿತು ಗ್ರ್ಯಾಂಡ್ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದಾರೆ. ಚಾರ್ಲಿ ಮತ್ತು ಧರ್ಮ (ರಕ್ಷಿತ್ ಶೆಟ್ಟಿ) ಇಬ್ಬರ ಸ್ನೇಹದ ಕಥೆ ಒಟಿಟಿ (OTT) ಪ್ಲಾಟ್‍ಫಾರ್ಮ್‍ನಲ್ಲಿ ಆಗಮಿಸಬೇಕೆಂದು ಬಹಳ ನಿರೀಕ್ಷೆಯಲ್ಲಿದ್ದವರಿಗೆ ಅವರು ಸಿಹಿ ಸುದ್ದಿ ನೀಡಿದರು.

ಈ ಜೋಡಿ ಕೆಲವು ಗಂಭೀರವಾದ ಬಿ.ಎಫ್.ಎಫ್ ಗುರಿಗಳನ್ನು ಹೊಂದಿದ್ದು, ಅಭಿಮಾನಿಗಳಿಗೆ ಅವರ ಪ್ರೀತಿಯ ಮತ್ತು ವಿಶೇಷ ಅನುಬಂಧದ ಕಥೆಯನ್ನು ಹೇಳುತ್ತಿದೆ.

ಕಿರಣರಾಜ್ ಕೆ. ಬರೆದು ನಿರ್ದೇಶಿಸಿದ ಮತ್ತು ಪರಂವಾ ಸ್ಟುಡಿಯೋಸ್ ನಿರ್ಮಿಸಿದ `777 ಚಾರ್ಲಿ’ಯು ಕನ್ನಡದ ಹೆಸರಾಂತ ನಟ ರಕ್ಷಿತ್ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಸೇರಿದಂತೆ ಪ್ರಮುಖ ತಾರಾಗಣವನ್ನು ಹೊಂದಿದೆ.

ರಕ್ಷಿತ್ ಶೆಟ್ಟಿ ಧರ್ಮನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು, ಮುದ್ದಾದ ನಾಯಿ ಚಾರ್ಲಿಯ ಜತೆಗಿನ ಸಂತೋಷಕರ ಬಾಂಧವ್ಯದ ಮೇಲೆ ಬೆಳಕು ಚೆಲ್ಲುತ್ತದೆ. ಈ ಇಬ್ಬರ ಗೆಳೆತನ ಮಾರ್ದವವಾಗಿದೆ. ಅದನ್ನು ಬಣ್ಣಿಸಲು ಪದಗಳು ಸೋಲುತ್ತವೆ. ಅಷ್ಟು ಅನನ್ಯವಾಗಿ ಹಾಗೂ ಮನೋಜ್ಞವಾಗಿ ಈ ಅನುಬಂಧವು ತೆರೆಯ ಮೇಲೆ ಮೂಡಿ ಬಂದು, ಕೋಟ್ಯಂತರ ಕನ್ನಡಿಗರ ಮನಗೆದ್ದಿದೆ. ಪ್ರಾಪಂಚಿಕ ಜೀವನದ ಜಂಜಾಟಗಳಲ್ಲಿ ಒಂಟಿಯಾಗಿದ್ದ ಧರ್ಮನ ಜತೆಗೆ ಬಾಂಧವ್ಯ ಬೆಳೆಸಿಕೊಳ್ಳುವ ಚಾರ್ಲಿ ಆತನ ಬದುಕಿನಲ್ಲಿ ಮಹತ್ತರ ಪರಿವರ್ತನೆಯೊಂದಕ್ಕೆ ಕಾರಣವಾಗುತ್ತದೆ. ಧರ್ಮನ ಮನೆ ಹಾಗೂ ಮನಸ್ಸಿಗೆ ಅಚಾನಕ್ಕಾಗಿ ಪ್ರವೇಶಿಸುವ ಚಾರ್ಲಿ ಆತನ ಎಲ್ಲ ನಂಬಿಕೆಗಳನ್ನೂ, ದೃಷ್ಟಿಕೋನಗಳನ್ನೂ ತಲೆಕೆಳಗು ಮಾಡಿ ಜೀವನೋತ್ಸಾಹ ತುಂಬುವ ದೃಶ್ಯಗಳು ಪ್ರತಿಯೊಬ್ಬರ ಮನ ಗೆದ್ದಿವೆ, ಕಣ್ಣಂಚಿನಲ್ಲಿ ನೀರು ತರಿಸಿವೆ. ಕಥೆ ಭಾವನಾತ್ಮಕವಾಗಿದೆ. ಮಾನವೀಯತೆಯನ್ನೂ ಮೀರಿದ ವಿಶಿಷ್ಟ ಅನುಬಂಧವೊಂದನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತದೆ. ಚಾರ್ಲಿಯ ನಟನೆಯಂತೂ ವೀಕ್ಷಕರ ಹೃದಯವನ್ನು ಸೂರೆಗೊಂಡಿದೆ.

ಒಟಿಟಿಯಲ್ಲಿ `777 ಚಾರ್ಲಿ’ ಬಿಡುಗಡೆಯ ಕುರಿತು ನಾಯಕ ನಟ ರಕ್ಷಿತ್ ಶೆಟ್ಟಿ ಮಾತನಾಡಿ, “ಧರ್ಮದಂತಹ ಪಾತ್ರವನ್ನು ನಿರ್ವಹಿಸುವುದು ನಿಜವಾಗಿಯೂ ಸವಾಲಾಗಿತ್ತು. ಪ್ರತಿಯೊಬ್ಬ ನಟನೂ ಬಯಸುವಂತಹ ಪಾತ್ರವದು. ಭಾವನೆಗಳ ಅನೇಕ ಪದರಗಳನ್ನು ಬಹಿರಂಗಪಡಿಸುವುದು ಮತ್ತು ಚಾರ್ಲಿಯೊಂದಿಗೆ ಒಟ್ಟಾಗಿ ಕೆಲಸ ಮಾಡುವುದು ಇಲ್ಲಿಯವರೆಗಿನ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ. ಚಾರ್ಲಿಯ ಸಮಯವನ್ನು ಹೊಂದಿಸುವುದು ಮತ್ತು ಅದರ ತರಬೇತಿ ಸೂಚನೆಗಳಿಗೆ ಸರಿಹೊಂದಿಸುವುದು ಕಠಿಣವಾಗಿತ್ತು. ಆದರೆ ಅದರ ಫಲ ಮಾತ್ರ ಅದ್ಬುತವಾಗಿದೆ. ಪ್ರೇಕ್ಷಕರಿಂದ ಬಂದಿರುವ ಪ್ರತಿಕ್ರಿಯೆಗಳ ಮಹಾಪೂರದಿಂದ ಇದು ಸ್ಪಷ್ಟವಾಗಿದೆ. ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿಯ ಕಥೆಯನ್ನು ಹೆಚ್ಚು ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ತಲುಪಿಸಲು ನಮ್ಮ ತಂಡ ತುಂಬ ಉತ್ಸುಕವಾಗಿದೆ. ಈಗ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಪದಾರ್ಪಣೆ ಮಾಡುತ್ತಿದ್ದು, ವೂಟ್ ಸೆಲೆಕ್ಟ್ (Voot Select) ನಲ್ಲಿ ಮಾತ್ರ ಸ್ಟ್ರೀಮ್ ಆಗಲಿದೆ” ಎಂದು ವಿವರಿಸಿದರು.

ಚಿತ್ರ ನಿರ್ದೇಶಕ ಕಿರಣರಾಜ್ ಕೆ. ಮಾತನಾಡಿ, `777 ಚಾರ್ಲಿ’ ಕೇವಲ ಒಂದು ಚಲನಚಿತ್ರವಲ್ಲ. ಬೇಷರತ್ತಾದ ಪ್ರೀತಿ ಮತ್ತು ಬದುಕಿನ ಭಾರವನ್ನು ಇಳಿಸುವ ಒಂದು ಸ್ನೇಹಪೂರ್ಣ ಅಪ್ಪುಗೆಯನ್ನು ಚಿತ್ರಿಸಿದ್ದು, ಇದು ಪ್ರತಿಯೊಬ್ಬ ಪ್ರೇಕ್ಷರರಲ್ಲೂ ಪ್ರತಿಧ್ವನಿಸುವ ಭಾವನೆಯಾಗಿದೆ. ಅದು ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಚಿತ್ರವು ಸಾಬೀತುಪಡಿಸುತ್ತಿದೆ! ಜೀವನದ ಕಥೆಯ ಈ ಎಳೆಯು ಅವಕಾಶಗಳನ್ನು ಬಳಸಿಕೊಳ್ಳುವ, ಪಕ್ಷಪಾತಗಳನ್ನು ಮೀರಿಸುವ ಮತ್ತು ಮುದ್ದಾದ ನಾಯಿಯ ಅಪ್ಪುಗೆಯಲ್ಲಿ ಸ್ನೇಹವನ್ನು ಕಂಡುಕೊಳ್ಳುವ ಪ್ರಯಾಣದಲ್ಲಿ ಪ್ರತಿಯೊಬ್ಬ ಪ್ರೇಕ್ಷಕರೂ ಜತೆಯಾಗಿದ್ದಾರೆ. ಈ ಅನುಬಂಧ ನಿವ್ರ್ಯಾಜವಾಗಿದೆ. ಧರ್ಮ ಮತ್ತು ಚಾರ್ಲಿಯ ಜೋಡಿಯಲ್ಲದೆ, ನಮ್ಮ ಶ್ರಮವನ್ನು ಗುರುತಿಸಿ, ಗೌರವಿಸುವ ಜತೆಗೆ ಈ ಚಿತ್ರವನ್ನು ಮೆಗಾ ಹಿಟ್ ಮಾಡಿರುವ ಪ್ರೇಕ್ಷಕರಿಗೆ ಕೃತಜ್ಞತೆ ವ್ಯಕ್ತಪಡಿಸಲು ಪದಗಳೇ ಸೋಲುತ್ತವೆ! ಧರ್ಮ ಮತ್ತು ಚಾರ್ಲಿಯ ವಿಶೇಷ ಸಂಬಂಧವು ನಮ್ಮ ಪ್ರೇಕ್ಷಕರ ಮನೆ-ಮನಗಳಿಗೆ ಪ್ರವೇಶಿಸುವ ಸುಸಂದರ್ಭವಾಗಿ ವೂಟ್ ಸೆಲೆಕ್ಟ್ (Voot Select)ನಲ್ಲಿ ಅದರ ಒಟಿಟಿ ಬಿಡುಗಡೆಗಾಗಿ ನಾನು ಉತ್ಸುಕನಾಗಿದ್ದೇನೆ” ಎಂದರು.

ಮನುಷ್ಯ ಮತ್ತು ಮುದ್ದಾದ ಶ್ವಾನದ ಒಡನಾಟವನ್ನು ಹೃದ್ಯವಾಗಿ ಚಿತ್ರಿಸಿರುವ `777 ಚಾರ್ಲಿ’ ಪ್ರೀತಿಯ ಕಥೆಯನ್ನು ವೂಟ್ ಸೆಲೆಕ್ಟ್‍ನಲ್ಲಿ ಮಾತ್ರ ವೀಕ್ಷಿಸಲು ಈಗಲೇ ಟ್ಯೂನ್ ಮಾಡಿ.

Comments are closed.