ಕರಾವಳಿ

ಬೆಚ್ಚಿಬೀಳಿಸಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣ: ವರ್ಷದಿಂದ ತಲೆ ಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್ ಬಂಧನ

Pinterest LinkedIn Tumblr

ಉಡುಪಿ: ಕಳೆದ ವರ್ಷ ಬ್ರಹ್ಮಾವರದ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿನ್ನು ಮಹಾರಾಷ್ಟ್ರದ ಗಾಂಧೇವಿ ನಿವಾಸಿ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೇ ಸೋನು (21) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ..
2021 ಜುಲೈ 12 ರಂದು ಬ್ರಹ್ಮಾವರ ತಾಲೂಕು ಕುಮ್ರಗೊಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ಅವರನ್ನು ಭೀಕರವಾಗಿ ಕೊಲೆ ಮಾಡಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಂಗಳ ಸೂತ್ರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಿಕೊಂಡು ಹೋದ ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಿ ಈ ಕೊಲೆಯ ಸೂತ್ರದಾರನಾದ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದುಕೊಂಡು ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದನು.

ಮೃತಳಾದ ವಿಶಾಲ ಗಾಣಿಗಳ ಗಂಡ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಕ್‌ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಬಂಧಿಸಿದ್ದು ಸುಲಿಗೆ ಮಾಡಿದ ಮೃತಳ ಚಿನ್ನಾಭರಣವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಬಂಧಿತರಾದ ಆರೋಪಿಗಳಿಬ್ಬರು ಕಳೆದ ಒಂದು ವರ್ಷದಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಇವರ ವಿರುದ್ದ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ಹತ್ಯೆ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಈತನು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಈತನು ಕಾಣೆಯಾದ ಬಗ್ಗೆ ಈತನ ಪೋಷಕರು ಈ ಬಗ್ಗೆ ಮುಂಬೈಯ ಗಾಮ್‌ದೇವಿ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವನ್ನು ದಾಖಲು ಮಾಡಿದ್ದರು.

(File Photo)

ಈ ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ರವರನ್ನು ಒಳಗೊಂಡ ವಿಶೇಷ ತಂಡವು ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಈತನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಬಂಧಿಸಿದ್ದಾರೆ.

ಈ ಸುಪಾರಿ ಹಂತಕನನ್ನು ಸೆರೆ ಹಿಡಿಯಲು ಕಳೆದ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿದ್ದರು. ಈತನು ವಿಶಾಲ ಗಾಣಿಗ ಕೊಲೆಯ ನಂತರ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ ಗಂಜ್ ಪರಿಸರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಈ ಆರೋಪಿಯಿಂದ ಕೊಲೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ ಸಿದ್ದಲಿಂಗಪ್ಪರವರ ಮಾರ್ಗದರ್ಶನದಂತೆ, ಉಡುಪಿ ಡಿವೈಎಸ್ಪಿ ಸುಧಾಕರ ಎಸ್ ನಾಯ್ಕ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಗುರುನಾಥ ಹಾದಿಮನಿ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಬ್ರಹ್ಮಾವರ ಠಾಣೆಯ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್, ಕೋಟ ಠಾಣೆಯ ಸಿಬ್ಬಂದಿಗಳಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಕೃಷ್ಣಪ್ಪ, ವಾಸುದೇವ ಪೂಜಾರಿ, ಪ್ರದೀಪ್ ನಾಯಕ್, ಕೃಷ್ಣ ಶೇರುಗಾರ್, ಶೇಖರ ಶೇರುಗಾರ್, ಜ್ಯೋತಿ ಎಂ, ನಾಗಶ್ರೀ ಹೆಚ್‌.ಪಿ. ರವರು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ.ಎನ್ ಅವರು ತಂಡವನ್ನು ಅಭಿನಂದಿಸಿದ್ದಾರೆ.

 

 

Comments are closed.