ಪ್ರಮುಖ ವರದಿಗಳು

ಅಮರನಾಥ ಮೇಘಸ್ಫೋಟ: 16 ಮಂದಿ ಸಾವು, 15,000 ಯಾತ್ರಾರ್ಥಿಗಳ ರಕ್ಷಣೆ, 40ಕ್ಕೂ ಹೆಚ್ಚು ಮಂದಿ ನಾಪತ್ತೆ

Pinterest LinkedIn Tumblr

ಶ್ರೀನಗರ: ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿ ಮೇಘಸ್ಫೋಟದಿಂದ ಪ್ರವಾಹಕ್ಕೆ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೇರಿದೆ. 15 ಸಾವಿರ ಯಾತ್ರಿಕರನ್ನು ಪಂಜತರ್ನಿ ಮೂಲ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಗಡಿ ಭದ್ರತಾ ಪಡೆಯ ವಕ್ತಾರ, ಬಲ್ತಲ್ ಎಂಬಲ್ಲಿಗೆ 16 ಮೃತದೇಹಗಳನ್ನು ರವಾನಿಸಲಾಗಿದೆ, ತನ್ನ ಮಾರ್ಗವನ್ನು ಐಟಿಬಿಪಿ ವಿಸ್ತರಿಸಿದ್ದು ಪಂಜತರ್ನಿಯವರೆಗೆ ಪವಿತ್ರ ಗುಹೆಯ ಕೆಳಭಾಗದಿಂದ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಜೂನ್ 30ರಂದು ಆರಂಭವಾಗಿದ್ದ ಪವಿತ್ರ ಅಮರನಾಥ ಯಾತ್ರೆ ಬಳಿಕ ಸ್ಥಗಿತಗೊಂಡಿತ್ತು. ಇನ್ನು ಪರಿಹಾರ ರಕ್ಷಣಾ ಕಾರ್ಯ ಮುಗಿದ ನಂತರ ಯಾತ್ರೆ ಪುನರಾರಂಭದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಎನ್.ಡಿ.ಆರ್.ಎಫ್ ಡಿಜಿ ಅತುಲ್ ಕಾರ್ವಾಲ್, 16 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಇನ್ನೂ 40 ಮಂದಿ ಕಾಣೆಯಾಗಿದ್ದಾರೆ. ನಿನ್ನೆಯ ನಂತರ ಭೂಕುಸಿತ ಉಂಟಾಗಿಲ್ಲ, ಮಳೆ ಸುರಿದಿಲ್ಲ, ರಕ್ಷಣಾ ಕಾರ್ಯ ನಿರಾತಂಕವಾಗಿ ಸಾಗುತ್ತಿದೆ. 4 ಎನ್ ಡಿಆರ್ ಎಫ್ ತಂಡ 100ಕ್ಕೂ ಹೆಚ್ಚು ಮಂದಿ ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಭಾರತೀಯ ಸೇನೆ, ಎಸ್ ಡಿಆರ್ ಎಫ್, ಸಿಆರ್ ಪಿಎಫ್ ಮತ್ತು ಇತರರು ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ ಎಂದರು.

ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆಯವರೆಗೆ 29 ಮಂದಿಯನ್ನು ರಕ್ಷಿಸಲಾಗಿದ್ದು 9 ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಭಾರತೀಯ ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.