ಕರಾವಳಿ

ಹೊಳೆಯಲ್ಲಿ‌ ಮುಳುಗಿ‌ ಮೃತಪಟ್ಟ ಪಿಯು ವಿದ್ಯಾರ್ಥಿಗಳಿಬ್ಬರ ಕುಟುಂಬಕ್ಕೆ ತಲಾ‌ 1 ಲಕ್ಷ ಆರ್ಥಿಕ ಸಹಕಾರ ನೀಡಿದ ಬೈಂದೂರು ಶಾಸಕ ಬಿ.ಎಂ.ಎಸ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮಾರ್ಚ್ ತಿಂಗಳಿನಲ್ಲಿ ಉಡುಪಿ ಜಿಲ್ಲೆ ಅಮಾಸೆಬೈಲು ಠಾಣೆ ವ್ಯಾಪ್ತಿಯ ಮಚ್ಚಟ್ಟು ಕಳೀನಜೆಡ್ಡು ಹೊಳೆಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ‌ 18 ವರ್ಷ ಪ್ರಾಯದ ವಿದ್ಯಾರ್ಥಿಗಳಿಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು ಇಬ್ಬರ ನೊಂದ ಕುಟುಂಬಕ್ಕೆ ಬೈಂದೂರು ಶಾಸಕ ಆರ್ಥಿಕ‌‌‌ ಸಹಾಯ ಮಾಡಿದ್ದಾರೆ.

ಶಂಕರನಾರಾಯಣ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳೂರು-74 ನಿವಾಸಿಗಳಾದ ಸುಮಂತ ಮಡಿವಾಳ (18), ಗಣೇಶ್ (18) ಮೃತ ದುರ್ದೈವಿಗಳಾಗಿದ್ದರು. ಬೈಂದೂರು ಶಾಸಕ ಬಿ.ಎಂ‌‌ ಸುಕುಮಾರ ಶೆಟ್ಟಿಯವರು ವೈಯಕ್ತಿಕ ನೆಲೆಗಟ್ಟಿನಲ್ಲಿ ಈ ಎರಡು ಕುಟುಂಬಕ್ಕೆ ತಲಾ‌ 1 ಲಕ್ಷ ಆರ್ಥಿಕ ಸಹಾಯ ಮಾಡಿ‌ ಮಾನವೀಯತೆ ಮೆರೆದಿದ್ದಾರೆ. ಉಳ್ಳೂರು ಗ್ರಾ.ಪಂ ಕಚೇರಿಯಲ್ಲಿ ಧನಸಹಾಯ ನೀಡಿದ್ದು ಈ ವೇಳೆ ಮಾಜಿ ಜಿ.ಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಗ್ರಾ.ಪಂ‌ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಉಪಾಧ್ಯಕ್ಷೆ ರತ್ನಾ ಮೊಗವೀರ,‌ ಸದಸ್ಯ ಸುಧಾಕರ ಶೆಟ್ಟಿ, ಮಾಜಿ ಅಧ್ಯಕ್ಷ ಪ್ರಸಾದ ಶೆಟ್ಟಿ, ಪಿಡಿಒ ಶ್ರೀಧರ್ ಮೊದಲಾದವರು ಇದ್ದರು.

(ಮೃತ ಸುಮಂತ್, ಗಣೇಶ್)

ಘಟನೆ ಹಿನ್ನೆಲೆ…
ಸುಮಂತ್ ಹಾಗೂ ಗಣೇಶ್ ಸ್ನೇಹಿತರಾಗಿದ್ದು ಘಟನೆಯ ದಿನ ಹೊಳೆ ಬಳಿ ತೆರಳಿದ್ದು ಸ್ನಾನಕ್ಕೆಂದು ನೀರಿಗಿಳಿದಾಗ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ. ಇದನ್ನು ಕಂಡ ವ್ಯಕ್ತಿಯೊಬ್ಬರ ಮಾಹಿತಿಯಂತೆ ಸ್ಥಳೀಯರು ರಕ್ಷಿಸಲು ಮುಂದಾದರೂ‌ ಕೂಡ ಇಬ್ಬರು ಯುವಕರು ನೀರಿನಲ್ಲಿ‌ ಮುಳುಗಿ ಮೃತಪಟ್ಟಿದ್ದಾರೆ.

 

Comments are closed.