ಬೆಳಗಾವಿ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಉದ್ಯಮಿ ಆರ್.ಎನ್.ನಾಯಕ್ ಕೊಲೆ ಆರೋಪ ಪ್ರಕರಣದಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ ವಿರುದ್ಧ ದಾಖಲಾಗಿರುವ ಕೋಕಾ ಪ್ರಕರಣದ ಅಂತಿಮ ತೀರ್ಪು ಇಂದು(ಬುಧವಾರ) ಬೆಳಗ್ಗೆ 11ಕ್ಕೆ ಬೆಳಗಾವಿ ಕೋಕಾ ನ್ಯಾಯಾಲಯ ಪ್ರಕಟಿಸಲಿದೆ.

2013ರ ಡಿಸೆಂಬರ್ 21ರಂದು ಸುಪಾರಿ ನೀಡಿ ಆರ್.ಎನ್.ನಾಯಕ್ ಹತ್ಯೆ ಮಾಡಿಸಿದ ಆರೋಪ ಬನ್ನಂಜೆ ರಾಜಾ ಮೇಲಿದ್ದು, 3 ಕೋಟಿ ರೂ. ಹಫ್ತಾ ನೀಡದ ಹಿನ್ನೆಲೆ ಹತ್ಯೆ ಮಾಡಿದ ಆರೋಪವಿದೆ. 13 ಆರೋಪಿಗಳ ಪೈಕಿ ಬನ್ನಂಜೆ ರಾಜಾ 9ನೇ ಆರೋಪಿ. ಬನ್ನಂಜೆ ರಾಜಾ ವಿರುದ್ಧ ಕೋಕಾ ಕಾಯ್ದೆಯಡಿ ಕರ್ನಾಟಕ ಪಶ್ಚಿಮ ವಲಯದ ಪೊಲೀಸರು ಪ್ರಕರಣ ದಾಖಲಿಸಿದ್ದರು.
ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ 2015ರ ಫೆಬ್ರವರಿ 12ರಂದು ಮೊರಕ್ಕೊದಲ್ಲಿ ಬನ್ನಂಜೆ ರಾಜಾ ಬಂಧನವಾಗಿತ್ತು. ಬಳಿಕ ಭಾರತಕ್ಕೆ ಭೂಗತ ಪಾತಕಿ ಬನ್ನಂಜೆ ರಾಜಾ ಹಸ್ತಾಂತರಿಸಲಾಗಿತ್ತು. 2015ರ ಆಗಸ್ಟ್ 14ರಂದು ಭಾರತಕ್ಕೆ ಬನ್ನಂಜೆ ರಾಜಾ ಕರೆತರಲಾಗಿತ್ತು. ಕೋಕಾ ಕಾಯ್ದೆಯಡಿ ಬನ್ನಂಜೆ ರಾಜಾ ವಿರುದ್ಧ ಕೇಸ್ ದಾಖಲಿಸಲಾಗಿತ್ತು. 2000ರಲ್ಲಿ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಕೋಕಾ) ರಚನೆಯಾದ ಬಳಿಕ ಬನ್ನಂಜೆ ರಾಜಾ ವಿರುದ್ಧ ಮೊದಲ ಕೇಸ್ ದಾಖಲಾಗಿತ್ತು.
ಸುದೀರ್ಘ 7 ವರ್ಷಗಳ ವಿಚಾರಣೆ ಬಳಿಕ ಇಂದು ಅಂತಿಮ ತೀರ್ಪನ್ನು ಬೆಳಗಾವಿ ಕೋಕಾ ವಿಶೇಷ ನ್ಯಾಯಾಲಯ ಪ್ರಕಟಿಸಲಿದ್ದು ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ 13 ಆರೋಪಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.
Comments are closed.