ಕರಾವಳಿ

ರೌಡಿ ಶೀಟರ್ ಆಕಾಶಭವನ ಶರಣ್, ಪಿಂಕಿ ನವಾಜ್ ಗೂಂಡಾ ಕಾಯ್ದೆಯಡಿ ಬಂಧನ ಅವಧಿ ವಿಸ್ತರಣೆ

Pinterest LinkedIn Tumblr

ಮಂಗಳೂರು: ರೌಡಿ ಶೀಟರ್ ಗಳಾದ ಆಕಾಶಭವನ ಶರಣ್ ಮತ್ತು ಪಿಂಕಿ ನವಾಜ್ ಇಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದ್ದು, ಮುಂದಿನ ಒಂದು ವರ್ಷದ ತನಕ ಬಂಧನ ಅವಧಿಯನ್ನು ಮುಂದುವರೆಸಿ ಸರ್ಕಾರದ ಪರವಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ರಾಜಶೇಖರ ಎಂ.ಜಿ. ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಮಂಗಳೂರು ಕಮಿಷನರ್ ಶಶಿಕುಮಾರ್ ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರವು ಅನುಮೋದಿಸಿತ್ತು. ಸಲಹಾ ಮಂಡಳಿಯು ಬಂಧಿಯನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ವರದಿಯಲ್ಲಿ ಅಭಿಪ್ರಾಯಪಟ್ಟಿದೆ‌. ಇದೀಗ ಬಂಧನ ಅವಧಿಯನ್ನು ಮುಂದುವರೆಸಲಾಗಿದೆ.

ಗೂಂಡಾ ಕಾಯ್ದೆಗೆ ಸಂಬಂಧಿಸಿದ ವರದಿ ಸಿದ್ಧಪಡಿಸಿದ ತಂಡದಲ್ಲಿ ಕಾನೂನು& ಸುವ್ಯವಸ್ಥೆ ಡಿಸಿಪಿ ಹರಿರಾಂ ಶಂಕರ್, ಉತ್ತರ ವಲಯ ಎಸಿಪಿ ಮಹೇಶ್ ಕುಮಾರ್, ಸಿಸಿಆರ್’ಬಿ ಎಸಿಪಿ ರವೀಶ್, ಕಾವೂರು ಠಾಣಾ ನಿರೀಕ್ಷಕ ರಾಘವ ಪಡೀಲ್, ಸುರತ್ಕಲ್ ಠಾಣಾ ನಿರೀಕ್ಷಕ ಚಂದ್ರಪ್ಪ ಅವರಿದ್ದು, ಇವರಿಗೆ ಕ್ರೈಂ ಡಿಸಿಪಿ ದಿನೇಶ್ ಅವರು ಸಹಕಾರ ನೀಡಿದ್ದರು. ಈ ತಂಡಕ್ಕೆ ಡಿಜಿ & ಐಜಿಪಿ ಅವರು ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಸಮಾಜ ವಿದ್ರೋಹಿ ಕೆಲಸ ಮಾಡುವವರನ್ನು, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳನ್ನು ಮಾಡುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತಹ ಅವಕಾಶಗಳು ಕಮೀಷನರ್ ಅವರಿಗೆ ಇದ್ದು, ಅದರನ್ವಯ ಈ ಇಬ್ಬರು ವ್ಯಕ್ತಿಗಳ ಮೇಲೆ ಕರ್ನಾಟಕ ಕಳ್ಳಬಟ್ಟಿ, ಸಾರಾಯಿ ವ್ಯವಹಾರ, ಮಾದಕ ವಸ್ತುಗಳು ಅಪರಾಧಿಗಳ, ಜೂಜುಕೋರರ, ಗೂಂಡಾ, ಅನೈತಿಕ ವ್ಯವಹಾರಗಳ ಅಪರಾಧ ಮತ್ತು ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಮತ್ತು ವಿಡಿಯೋ ಅಥವಾ ಅಡಿಯೋ ಪೈರೇಟ್ಸ್ ಅಧಿನಿಯಮ 1985 (1985ರ ಕರ್ನಾಟಕ ಅಧಿನಿಯಮ 12) ಅಡಿಯಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಆರೋಪವಿದೆ. ಈ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಲು ಆದೇಶ ಹೊರಡಿಸಿದ್ದರು.

Comments are closed.