ಪ್ರಮುಖ ವರದಿಗಳು

ನಾಲ್ಕೂವರೆ ತಿಂಗಳ ಬಳಿಕ ಮತ್ತೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯಲ್ಲಿ ಏರಿಕೆ..!

Pinterest LinkedIn Tumblr

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಂಗಳವಾರ ದೇಶಾದ್ಯಂತ 80 ಪೈಸೆ ಏರಿಕೆಯಾಗಿದ್ದು, ಅಡುಗೆ ಅನಿಲ ಬೆಲೆ ಪ್ರತಿ ಸಿಲಿಂಡರ್ ಗೆ 50 ರೂಪಾಯಿ ಹೆಚ್ಚಳವಾಗಿದೆ. ನಾಲ್ಕೂವರೆ ತಿಂಗಳ ನಂತರ ಇಂಧನ ಬೆಲೆ ಹೆಚ್ಚಳವಾಗುತ್ತಿದೆ.

ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 96 ರೂಪಾಯಿ 21 ಪೈಸೆಯಾಗಿದೆ. ಈ ಹಿಂದೆ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 95 ರೂಪಾಯಿ 41 ಪೈಸೆಯಾಗಿತ್ತು. ಡೀಸೆಲ್ ಬೆಲೆ 86 ರೂಪಾಯಿ 67 ಪೈಸೆಯಿಂದ 87 ರೂಪಾಯಿ 47 ಪೈಸೆಗೆ ಹೆಚ್ಚಳವಾಗಿದೆ.

14.2 ಕೆಜಿ ತೂಕದ ಸಬ್ಸಿಡಿ ಸಿಲಿಂಡರ್ ಬೆಲೆ 949 ರೂಪಾಯಿ 50 ಪೈಸೆಯಾಗಿದೆ. ಎಲ್ ಪಿಜಿ ಸಿಲಿಂಡರ್ ಬೆಲೆ ಕಳೆದ ಬಾರಿ ಹೆಚ್ಚಳವಾಗಿದ್ದು ಅಕ್ಟೋಬರ್ 6ರಂದು. ಕಳೆದ ಬಾರಿ ನವೆಂಬರ್ 4ರಂದು ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗಿದ್ದು, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಂತರ ನಾಲ್ಕೂವರೆ ತಿಂಗಳು ಇಂಧನ ದರ ಏರಿಕೆಯಾಗಿರಲಿಲ್ಲ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ನವೆಂಬರ್ ಆರಂಭದಲ್ಲಿ ಬ್ಯಾರೆಲ್‌ಗೆ ಯು.ಎಸ್.ಡಿ 81-82 ರಷ್ಟಿದ್ದು ಈಗ ಯು.ಎಸ್.ಡಿ 114 ರಷ್ಟಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 349 ರೂಪಾಯಿ ಆಗಿದ್ದರೆ, 10 ಕೆಜಿ ಕಾಂಪೋಸಿಟ್ ಬಾಟಲ್ 669 ರೂಪಾಯಿ ಆಗಿದೆ ಎಂದು ಮೂಲಗಳು ತಿಳಿಸಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 2003.50 ರೂಪಾಯಿಗಳಾಗಿದೆ.

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಲೀಟರ್ ಗೆ 101 ರೂಪಾಯಿ 42 ಪೈಸೆಯಾಗಿದ್ದರೆ ಡೀಸೆಲ್ ದರ ಲೀಟರ್ ಗೆ 85 ರೂಪಾಯಿ 80 ಪೈಸೆಯಾಗಿದೆ. ಇನ್ನು ಎಲ್ ಪಿಜಿ ಸಿಲಿಂಡರ್ ಬೆಲೆ 902 ರೂಪಾಯಿ 50 ಪೈಸೆಯಾಗಿದೆ.

 

Comments are closed.