ಕರಾವಳಿ

ಇತಿಹಾಸ ಪ್ರಸಿದ್ಧ ‘ಕನ್ನುಕೆರೆ’ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ, ಕನ್ನುಕೆರೆ ಕೆರೆ ಅಭಿವೃದ್ಧಿ ಮಂಡಳಿ ಕನ್ನುಕೆರೆ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆ ಗ್ರಾಮಪಂಚಾಯತ್, ಕನ್ನುಕೆರೆ ಫ್ರೆಂಡ್ಸ್ ಕನ್ನುಕೆರೆ, ರೋಟರಿ ಕ್ಲಬ್ ತೆಕ್ಕಟ್ಟೆ, ಜನಸೇವಾ ಟ್ರಸ್ಟ್ ಮೂಡುಗಿಳಿಯಾರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕನ್ನುಕೆರೆ ಇವರ ಸಹಭಾಗಿತ್ವದಲ್ಲಿ ‘ನಮ್ಮೂರು ನಮ್ಮ‌ಕೆರೆ’ ಅಭಿವೃದ್ಧಿ ಯೋಜನೆಯಡಿಯಲ್ಲಿ ಕನ್ನುಕೆರೆ ಕೆರೆಯ ಪುನರುಜ್ಜೀವನ ಕಾರ್ಯಕ್ಕೆ ಗುದ್ದಲಿ ಪೂಜೆ ಶುಕ್ರವಾರ ನೆರವೇರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಪ್ರಾಣಿ-ಪಕ್ಷಿ ಸಂಕುಲ ಸಹಿತ ಮಾನವನ ನಿತ್ಯ ದಿನಚರಿಯ ಉಪಯುಕ್ತ ಅವಶ್ಯಕತೆಗಳಲ್ಲಿ ನೀರು ಪ್ರಮುಖವಾಗಿದೆ. ವನಗಳನ್ನು ನಾಶ ಮಾಡುವ ವಿಕೃತಿ ಸರಿಯಲ್ಲ. ನೀರಿನ ಅಂತರ್ಜಲ ಮಟ್ಟ ಕುಸಿಯಲು ಬಿಟ್ಟರೆ ಮುಂದಿನ ದಿನದಲ್ಲಿ ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ. ಕೆರೆಕಟ್ಟೆಗಳಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಅವಕಾಶ ಮಾಡಿದರೆ ಎಲ್ಲರಿಗೂ ಉತ್ತಮ. ಈ ನಿಟ್ಟಿನಲ್ಲಿ ಡಾ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ ದಂಪತಿಗಳ ‘ನಮ್ಮೂರು ನಮ್ಮ‌ಕೆರೆ’ ಯೋಜನೆ ಅಭಿನಂದನಾರ್ಹ ಎಂದರು.

ಧ.ಗ್ರಾ ಯೋಜನೆ ಜಿಲ್ಲಾ ನಿರ್ದೇಶಕ ಗಣೇಶ್ ಬಿ. ಮಾತನಾಡಿ, ದೇವರ ಸಾನಿಧ್ಯದ ಪಕ್ಕದಲ್ಲಿರುವ ಕಲ್ಯಾಣಿಯನ್ನು ಯೋಜನೆಯಿಂದ ನಾಲ್ಕೂವರೆ ಲಕ್ಷ ಅಂದಾಜು ವೆಚ್ಚದ ಅನುದಾನದಲ್ಲಿ ಪುನಶ್ಚೇತನ‌ ಮಾಡುವ ಮೂಲಕ ಗ್ರಾಮದಲ್ಲಿ ನೀರಿನ ಕೊರತೆ‌ ನೀಗಿಸುವ ಕಾರ್ಯವಾಗಲಿದೆ. ರಾಜ್ಯದಲ್ಲಿ ಇದು‌ 445ನೇ ಕೆರೆಯಾಗಿದ್ದು ಉಡುಪಿ ಜಿಲ್ಲೆಯಲ್ಲಿ 13ನೇ ಹಾಗೂ ಕುಂದಾಪುರ ತಾಲೂಕಿನಲ್ಲಿ ಪುನರುಜ್ಜೀವನ ನಡೆಯುತ್ತಿರುವ ಮೂರನೇ ಕೆರೆ ಇದಾಗಿದೆ‌ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಪರ್ತಕರ್ತ ವಸಂತ್ ಗಿಳಿಯಾರ್, ಉದ್ಯಮಿ ವಿಠ್ಠಲ ಶೆಟ್ಟಿ ಕೊರ್ಗಿ, ಕುಂದಾಪುರ ತಾಲ್ಲೂಕು ಜನಜಾಗೃತಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಧ.ಗ್ರಾ ಯೋಜನೆ ವಲಯ ಅಧ್ಯಕ್ಷೆ ಜಯಂತಿ ಕಾಂಚನ್, ಉದ್ಯಮಿ ಸಂತೋಷ್ ನಾಯಕ್ ತೆಕ್ಕಟ್ಟೆ, ಗಣಪತಿ ನಾಯಕ್, ಸಮಾಜ ಸೇವಕ ಗಣೇಶ್ ಪುತ್ರನ್, ಮಂಜುನಾಥ ಕಾಂಚನ್, ತೆಕ್ಕಟ್ಟೆ ಗ್ರಾ.ಪಂ. ಸದಸ್ಯೆ ಪ್ರತಿಮಾ ಉಪಸ್ಥಿತರಿದ್ದರು.

ನಾಟಕ ಕಲಾವಿದ ನಾಗರಾಜ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Comments are closed.