ಕರಾವಳಿ

ದಲಿತ ವೈದ್ಯಾಧಿಕಾರಿ ವರ್ಗಾವಣೆಗೊಳಿಸಿ ದೌರ್ಜನ್ಯ ಆರೋಪ; ಬೈಂದೂರು ಶಾಸಕ ಸಹಿತ ಹಲವರ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ಡಾ. ವೀಣಾ ನಾರಾಯಣ ಶಿರೂರು (45) ಎಂಬವರ ವರ್ಗಾವಣೆಗೆ ವಿಚಾರಕ್ಕೆ ಸಂಬಂಧಿಸಿ ಬೈಂದೂರು ಶಾಸಕ ಬಿ.ಎಂ‌ ಸುಕುಮಾರ್ ಶೆಟ್ಟಿ, ಇಬ್ಬರು ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 13 ಮಂದಿಯ ವಿರುದ್ಧ ದೂರುದಾರರ ಖಾಸಗಿ ದೂರಿನಡಿ ನ್ಯಾಯಾಲಯದ ನಿರ್ದೇಶನದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾ.ನಾಗರಾಜ್ ಖಾರ್ವಿ ಕಿರಿಮಂಜೇಶ್ವರದ ಪಶು ವೈದ್ಯಾಧಿಕಾರಿಯಾಗಿ ಹಾಗೂ ಅವರ ಪತ್ನಿ ಡಾ.ವತ್ಸಲಾ ಗೋಣಿ ಅಂಕೋಲಾ ಸಾರ್ವಜನಿಕ ಆಸ್ಪತ್ರೆ ಯಲ್ಲಿ ದಂತ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಗಂಡ ಹೆಂಡತಿ ಒಟ್ಟಿಗೆ ಒಂದೇ ಕಡೆ ಕರ್ತವ್ಯ ನಿರ್ವಹಿಸಬೇಕೆಂಬ ದುರುದ್ದೇಶದಿಂದ ಪರಿಶಿಷ್ಟ ಜಾತಿ ಸಮಗಾರ ಜನಾಂಗದ ಡಾ.ವೀಣಾ ಅವರನ್ನು ತನ್ನ ಪತ್ನಿಯ ಸ್ಥಾನಕ್ಕೆ ವರ್ಗಾವಣೆ ಗೊಳಿಸಿ, ಪತ್ನಿಯನ್ನು ಡಾ.ವೀಣಾ ಕರ್ತವ್ಯ ನಿರ್ವಹಿಸುತ್ತಿದ್ದ ಬೈಂದೂರು ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದರು.

ಡಾ.ವೀಣಾ ವಿರುದ್ಧ 2019ರ ಆ.8ರಂದು ಡಾ.ನಾಗರಾಜ್, ಕಿರಿಮಂಜೇಶ್ವರ ಸಾರ್ವಜನಿಕರಿಂದ ದೂರು ಎಂಬುದಾಗಿ ಸುಳ್ಳು ಹಾಗೂ ಕ್ಷುಲ್ಲಕ ಮಾಹಿತಿಯನ್ನು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ನೀಡಿ ದೌರ್ಜನ್ಯ ಎಸಗಿದ್ದರು. 10 ಮಂದಿ ನೀಡಿದ ಸುಳ್ಳು ಹಾಗೂ ಕ್ಷುಲ್ಲಕ ಮಾಹಿತಿಯನ್ನು ಶಾಸಕರು ಸ್ವೀಕರಿಸಿ, ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಕರ್ನಾಟಕ ಸೇವಾ ನಿಯಮದಡಿ ಯಲ್ಲಿ ರವಾನೆ ಮಾಡದೆ, 2019ರ ಜೂ.11ರಂದು ಮುಖ್ಯಮಂತ್ರಿಯವರಿಗೆ ಡಾ.ವೀಣಾ ಅವರನ್ನು ಶಿಕ್ಷಾರ್ಹ ರೀತಿಯ ವರ್ಗಾವಣೆ ಮಾಡುವಂತೆ ಪತ್ರವನ್ನು ಬರೆದು ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಡಾ.ನಾಗರಾಜ್ ನೀಡಿದ ಪ್ರಯೋಜಿತ ದೂರು ಅರ್ಜಿ ಹಾಗೂ ಬೈಂದೂರು ಶಾಸಕರ ಕಾನೂನು ಬಾಹಿರ ಶಿಫಾರಸ್ಸು ಪತ್ರದ ಮೇರೆಗೆ 2020ರ ಆ.31ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯು ಡಾ.ವೀಣಾ ಅವರನ್ನು ಡಾ.ವತ್ಸಲಾ ಅವರ ಸ್ಥಾನಕ್ಕೆ ಹಾಗೂ ಡಾ.ವತ್ಸಲಾರನ್ನು ಡಾ.ವೀಣಾ ಕರ್ತವ್ಯ ನಿರ್ವಹಿಸುವ ಜಾಗಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಿದ್ದಾರೆ ಎಂದು ದೂರಲಾಗಿದೆ.

ಡಾ.ವೀಣಾ, ಶಾಸಕರನ್ನು ಭೇಟಿ ಮಾಡಿ ತನ್ನ ಅಳಲನ್ನು ತೋಡಿಕೊಂಡಾಗ ‘ನನಗೆ ನೀವು ಮುಖ್ಯವಲ್ಲ, ನನಗೆ ಮುಖ್ಯವಾಗಿರುವುದು ಡಾ.ನಾಗರಾಜ್ ಜನಾಂಗಕ್ಕೆ ಸೇರಿದ 9000 ಓಟು. ಆದುದರಿಂದ ನೀವು ನನ್ನ ಬಳಿ ಬರಬೇಡಿ’ ಎಂದು ಬೆದರಿಸಿ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.