ಮಂಗಳೂರು: ನಗರದ ಪದವಿನಂಗಡಿನ ಬಾಡಿಗೆ ಮನೆಯೊಂದಕ್ಕೆ ದಂಪತಿಗಳ ನಡುವಿನ ಸಮಸ್ಯೆಯನ್ನು ಪರಿಹಾರ ಮಾಡಬೇಕೆಂದು ಮನೆಯಲ್ಲಿ ಪೂಜೆ ಮಾಡಬೇಕೆಂದು ವ್ಯಕ್ತಿಯೊಬ್ಬರನ್ನು ಕರೆಯಿಸಿ ಹನಿಟ್ರಾಪ್ ಮಾಡಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ದಂಪತಿ ಆರೋಪಿಗಳನ್ನು ಬಂಧಿಸಲಾಗಿದ್ದು ಹನಿಟ್ರಾಪ್ ಪ್ರಕರಣವೊಂದನ್ನು ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ಮೇರಿಹಿಲ್ ನಿವಾಸಿ ಭವ್ಯ (30) ಮತ್ತು ಕುಮಾರ್ @ ರಾಜು (35) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೋರ್ವರನ್ನು ಭೇಟಿಯಾಗಿದ್ದ ದಂಪತಿಗಳು ತಮ್ಮ ಮನೆಯಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಮನೆಯಲ್ಲಿ ಪೂಜೆಯನ್ನು ಮಾಡಿಕೊಡಬೇಕೆಂದು ಮನೆಗೆ ಕರೆಯಿಸಿಕೊಂಡು ಮನೆಯಲ್ಲಿರುವ ಸಮಯ ಪುರೋಹಿತರ ಜೊತೆಗಿರುವ ಫೋಟೋ ಮತ್ತು ವೀಡಿಯೋವನ್ನು ತೆಗೆದು ನಂತರ ಈ ವೀಡಿಯೋ ಹಾಗೂ ಫೋಟೋವನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಹಲವು ಬಾರಿ ದೂರುದಾರರನ್ನು ಹೆದರಿಸಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಹಣದ ಬೇಡಿಕೆ ಇಟ್ಟು ರೂ 15 ಲಕ್ಷ ನಗದು ಹಣ ಹಾಗೂ ಸುಮಾರು 34 ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಖಾತೆಗಳಿಂದ ಆರೋಪಿಗಳು ನೀಡಿದ ಬ್ಯಾಂಕ್ ಬೇರೆ ಬೇರೆ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈ ಪ್ರಕರಣದ ತನಿಖೆಯನ್ನು ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತ್ರತ್ವದ ತಂಡ ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ಈ ಕೃತ್ಯದಲ್ಲಿ ಭಾಗಿಯಾದ ದಂಪತಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಇತರ ಕೆಲವು ವ್ಯಕ್ತಿಗಳಿಗೆ ಇದೇ ರೀತಿ ಹನಿಟ್ಯ್ರಾಪ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ಮುಂದುವರಿಯುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಶದಿಂದ ರೂ 37,000/- ಮೌಲ್ಯದ ಎರಡು 2 ಚಿನ್ನದ ರಿಂಗ್, ನಗದು ಹಣ ರೂ. 31,000/-ರೂ ಮತ್ತು 4 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳ ಜೊತೆ ಇತರರು ಕೂಡಾ ಭಾಗಿಯಾಗಿ ಹಣವನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ತನಿಖೆ ಮುಂದುವರಿಯುವುದು. ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರ, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿರುವುದಲ್ಲದೇ ಇನ್ನಷ್ಟು ಹಣವನ್ನು ನೀಡದೇ ಇದ್ದರೆ ಸುದ್ದಿ ಮಾಧ್ಯಮಗಳಲ್ಲಿ ಫೋಟೋ ಮತ್ತು ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಆರೋಪಿಗಳ ಪೈಕಿ ಕುಮಾರ್ ತನ್ನ ಹೆಸರನ್ನು ರಾಜು ಎಂದು ತಿಳಿಸಿ ಮಧ್ಯವರ್ತಿಯಾಗಿ ಸಂತ್ರಸ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿಕೊಂಡು ಹಣ ವಸೂಲಿ ಮಾಡಿರುವುದಾಗಿದೆ.
ಹನಿಟ್ರಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು ಈ ಕೃತ್ಯವೆಸಗಿದ ನಂತರ ಸಂತ್ರಸ್ತರಿಂದ ಸುಲಿಗೆ ಮಾಡಿದ ಹಣದಲ್ಲಿ ರೂ 10 ಲಕ್ಷ ಹಣವನ್ನು ನೀಡಿ ಫ್ಲಾಟ್ ವೊಂದನ್ನು ಲೀಸ್ ಗೆ ಪಡೆದುಕೊಂಡಿರುವುದಲ್ಲದೇ, ಈ ಫ್ಲಾಟ್ ಗೆ ಸುಮಾರು 7 ಲಕ್ಷ ಮೌಲ್ಯದ ಮನೆ ಸಾಮಾಗ್ರಿಗಳನ್ನು ಖರೀದಿಸಿದ್ದರೆನ್ನಲಾಗಿದೆ. ಅಲ್ಲದೇ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಪೈಕಿ ಭವ್ಯಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಯವರಾದ ರಾಜೇಂದ್ರ ಬಿ, ಪ್ರದೀಪ ಟಿ. ಆರ್ ಹಾಗೂ ಸಿಸಿಬಿ ಸಿಬ್ಬಂದಿಯವರು ಇದ್ದರು.