ಕರ್ನಾಟಕ

‘ಹಿಂದು ಹೃದಯ ಸಾಮ್ರಾಟ’ ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಇ‌ನ್ನೂ ಬಂದಿಲ್ಲವೇ?- ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವುದು ತಳಸಮುದಾಯದ ಮಹಾಪುರುಷರ ಬಗ್ಗೆ ಬಿಜೆಪಿ ಪಕ್ಷ ಮತ್ತು ಕೇಂದ್ರ ಸರ್ಕಾರಕ್ಕೆ ಇರುವ ಪೂರ್ವಗ್ರಹ ಮತ್ತು ತಿರಸ್ಕಾರಕ್ಕೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಅವರು, ‘ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಯಾವ ಕಾರಣಕ್ಕಾಗಿ ಅವಕಾಶ ನಿರಾಕರಿಸಲಾಗಿದೆ? ನಾರಾಯಣ ಗುರುಗಳು ಹಿಂದೂ ಧರ್ಮಕ್ಕೆ ಸೇರಿದವರಲ್ಲವೇ? ಅಂತಹ ಅಭಿಪ್ರಾಯವನ್ನು ಬಿಜೆಪಿ ಪಕ್ಷ ಹೊಂದಿದ್ದರೆ ಹಾಗೆಂದು ಮುಕ್ತವಾಗಿ ಹೇಳುವ ಧೈರ್ಯ ತೋರಲಿ.ಹಿಂದೂ ಧರ್ಮದ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಿಸಿ ಅವಮಾನಿಸಿರುವುದು ‘ಹಿಂದು ಹೃದಯ ಸಾಮ್ರಾಟ’ ಎಂದು ಕರೆಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಇ‌ನ್ನೂ ಬಂದಿಲ್ಲವೇ?

ಶತಮಾನದ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತಷಾಹಿ ವ್ಯವಸ್ಥೆ ವಿರುದ್ದ ಸಿಡಿದೆದ್ದು ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದ ನಾರಾಯಣ ಗುರುಗಳಿಗೆ ಅವಮಾನಿಸಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?

ತಮ್ಮ ಮೂಗಿನಡಿಯಲ್ಲಿಯೇ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇನ್ನೂ ಪ್ರತಿಕ್ರಿಯಿಸದೆ ಇರುವುದು ಆಶ್ಚರ್ಯಕರ.ಇದನ್ನು ಹೇಗೆ ಅರ್ಥೈಸಬೇಕು?
ಈ ಅವಮಾನಕ್ಕೆ ಸಹಮತ ಇದೆಯೆಂದೇ?

ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕೆಂಬ ನಿರ್ಧಾರ ಕೈಗೊಂಡೆ.
ಇದರಿಂದಾಗಿ ಇಂದು ರಾಜ್ಯದ ಮೂಲೆಮೂಲೆಗೆ ಗುರುಗಳ ಚಿಂತನೆಯ ಸಂದೇಶ ತಲುಪುತ್ತಿದೆ‌ ಎಂಬ ಹೆಮ್ಮೆ ಮತ್ತು
ತೃಪ್ತಿ ನನ್ನದು.

ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು.ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಪ್ರಾಧಾನ್ಯ ಕೊಟ್ಟು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

Comments are closed.