ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಹಠಾತ್ ಕಳೆಗಿಳಿದಿದ್ದಾರೆ. ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಈ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಕಳೆದ 2014/15ರ ಆವೃತ್ತಿಯಲ್ಲಿ ಎಂಎಸ್ ಧೋನಿ ಅವರಿಂದ ಟೆಸ್ಟ್ ತಂಡದ ನಾಯಕತ್ವ ಸ್ವೀಕರಿಸಿದ್ದ ವಿರಾಟ್ ಕೊಹ್ಲಿ, 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುನ್ನಡೆಸಿದ್ದರು ಹಾಗೂ 40 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರು. ಆ ಮೂಲಕ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಾಯಕ ಎಂಬ ಸಾಧನೆಗೆ ಕಿಂಗ್ ಕೊಹ್ಲಿ ಭಾಜನರಾಗಿದ್ದಾರೆ.
ಈ ಬಗ್ಗೆ ಟ್ವಿಟರ್ ಸೇರಿದಂತೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿರಾಟ್ ಕೊಹ್ಲಿ ಪತ್ರಿಕಾ ಹೇಳಿಕೆ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್ ತಂಡದ ನಾಯಕನಾಗಿದ್ದ ಅವಧಿಯಲ್ಲಿ ತಮಗೆ ಬೆಂಬಲಿಸಿದ್ದ ಬಿಸಿಸಿಐ, ಮಾಜಿ ನಾಯಕ ಎಂಎಸ್ ಧೋನಿ, ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ ಹಾಗೂ ಸಹ ಆಟಗಾರರಿಗೆ ಕೊಹ್ಲಿ ಧನ್ಯವಾದ ಅರ್ಪಿಸಿದ್ದಾರೆ.
“ತಂಡವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು 7 ವರ್ಷಗಳ ನಿರಂತರ ಕಠಿಣ ಪರಿಶ್ರಮ ಇದಾಗಿದೆ. ನನ್ನ ತಂಡಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಪ್ರತಿಯೊಂದು ಸಂಗತಿಗಳು ಒಂದಲ್ಲ ಒಂದು ದಿನ ಅಂತ್ಯವಾಗಲೇಬೇಕು. ಅದರಂತೆ ಭಾರತ ಟೆಸ್ಟ್ ತಂಡದ ನನ್ನ ನಾಯಕತ್ವದ ಅವಧಿ ಇದೀಗ ಕೊನೆಗೊಂಡಿದೆ” ಎಂದರು.
“ಭಾರತ ಟೆಸ್ಟ್ ತಂಡದ ನಾಯಕನಾಗಿ ನನ್ನ ಪಯಣದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಆದರೆ ಇದರಲ್ಲಿ ಎಂದಿಗೂ ಪ್ರಯತ್ನದ ಕೊರತೆ ಹಾಗೂ ನಂಬಿಕೆಯ ಕೊರತೆಯನ್ನ ಕಂಡಿಲ್ಲ. ತಂಡದ ಯಶಸ್ಸಿಗಾಗಿ ಶೇ. 120 ರಷ್ಟು ಪ್ರಾಮಾಣಿಕ ಪ್ರಯತ್ನ ಹಾಕಿದ್ದೇನೆ. ತಂಡಕ್ಕೋಸ್ಕರ ನಾನು ಏನೆಲ್ಲಾ ಮಾಡಿದ್ದೇನೆಂಬ ಬಗ್ಗೆ ನನ್ನ ಹೃದಯದಲ್ಲಿ ಸ್ಪಷ್ಟತೆ ಇದೆ. ನನ್ನ ತಂಡಕ್ಕಾಗಿ ಅಪ್ರಾಮಾಣಿಕನಾಗಿ ನಾನು ಎಂದಿಗೂ ಇರುವುದಿಲ್ಲ,” ಎಂದು ವಿರಾಟ್ ಕೊಹ್ಲಿ ಭಾವುಕವಾಗಿ ಬರೆದಿದ್ದಾರೆ.
“ದೀರ್ಘ ಕಾಲ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟ ಬಿಸಿಸಿಐಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ ಹಾಗೂ ನಾಯಕನಾಗಿ ಮೊದಲನೇ ದಿನದಿಂದ ಅಂತಿಮ ದಿನದವರೆಗೂ ತಂಡದಲ್ಲಿ ಬೆಂಬಲ ಹಾಗೂ ಸಹಕಾರ ನೀಡಿದ್ದ ಸಹ ಆಟಗಾರರಿಗೆ ಮುಖ್ಯವಾಗಿ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.
“ತಂಡದ ಹಿಂದೆ ವಾಹನದ ಇಂಜಿನ್ ಆಗಿ ಮಹತ್ತರ ಪಾತ್ರವಹಿಸಿದ್ದ ರವಿ ಭಾಯ್ ಹಾಗೂ ಸಹಾಯಕ ಸಿಬ್ಬಂದಿಗೂ ಧನ್ಯವಾದ ಹಾಗೂ ಎಂಎಸ್ ಧೋನಿ ನನ್ನಲ್ಲಿನ ನಾಯಕತ್ವದ ಗುಣಗಳನ್ನು ಗುರುತಿಸಿದ್ದರು ಹಾಗೂ ಟೆಸ್ಟ್ ತಂಡದ ಜವಾಬ್ದಾರಿಯನ್ನು ನನಗೆ ಒಪ್ಪಿಸಿದ್ದರು,” ಎಂದು ಕೊಹ್ಲಿ ತಮ್ಮ ಮಾಜಿ ನಾಯಕನನ್ನು ಇದೇ ವೇಳೆ ಸ್ಮರಿಸಿಕೊಂಡರು.
Comments are closed.