ಕರಾವಳಿ

ಕೊರಗರ ಮೇಲೆ ಪೊಲೀಸರಿಂದ ಹಲ್ಲೆ ಪ್ರಕರಣ: ಮೆಹೆಂದಿ ಕಾರ್ಯಕ್ರಮದಲ್ಲಿದ್ದ ಹಲವರ ಮೇಲೆ ದೂರು ನೀಡಿದ ಕಾನ್ಸ್‌ಟೇಬಲ್

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ‌ ಕೊರಗ ಸಮುದಾಯದ ರಾಜೇಶ್ ಎನ್ನುವವರ ಮನೆಯಲ್ಲಿ ಸೋಮವಾರ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿದ್ದಾಗ ಕೋಟ ಪೊಲೀಸರು ಭೇಟಿ ನೀಡಿ ಅಲ್ಲಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಪ್ರತಿದೂರುಗಳು ದಾಖಲಾಗಿವೆ. ನೊಂದ ರಾಜೇಶ್ ಪೊಲೀಸರ ಮೇಲೆ ದೂರು ನೀಡಿದ್ದು ಮತ್ತೊಂದು ಕಡೆಯಿಂದ ಪೊಲೀಸ್ ಕಾನ್ಸ್‌ಟೆಬಲ್ ಓರ್ವರು ಪೊಲೀಸರ ಮೇಲೆ ಮೆಹೆಂದಿ ಕಾರ್ಯಕ್ರಮದಲ್ಲಿದ್ದವರು ಹೊಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರು ನೀಡಿದ್ದಾರೆ.

ರಾಜೇಶ್ ದೂರಿನ ಸಾರಾಂಶ…
ಡಿ.27ರಂದು ರಾತ್ರಿ 10 ರ ಸುಮಾರಿಗೆ ಮೆಹೆಂದಿ ಕಾರ್ಯಕ್ರಮ ಮುಗಿಅಲು ಅಣಿಯಾಗುತ್ತಿದ್ದಾಗ ಕೋಟ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸಂತೋಷ್‌ ಬಿ ಪಿ, ಹೆಡ್ ಕಾನ್ಸ್‌ಟೇಬಲ್ ಗಳಾದ ರಾಮಣ್ಣ, ಅಶೋಕ್ ಶೆಟ್ಟಿ, ಪೊಲೀಸ್ ಸಿಬ್ಬಂದಿ ಮಂಜುನಾಥ ಮತ್ತು ಇತರ ಸಿಬ್ಬಂದಿಯವರು ಮೆಹೆಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ನುಗ್ಗಿ, ಲಾಠಿಯಿಂದ ಗಣೇಶ ಬಾರ್ಕೂರು ಎಂಬರಿಗೆ ಹೊಡೆದು, ಹಲ್ಲೆ ನಡೆಸಿ ಜೀಪಿಗೆ ತುಂಬುತ್ತಿದ್ದಂತೆ ಹಿರಿಯ ಮಹಿಳೆಯರು ಮನವಿ ಮಾಡಿಕೊಂಡರೂ ಸ್ಪಂದಿಸದೇ, ಲಕ್ಷ್ಮೀ ಎಂಬರಿಗೆ ಲಾಠಿಯಿಂದ ಹಲ್ಲೆ ನಡೆಸಿ, ಸುದರ್ಶನ, ಗಿರೀಶ ಮತ್ತು ಸಚಿನ್ ಎಂಬುವವರನ್ನು ಜೀಪಿಗೆ ತುಂಬಿ ಠಾಣೆಗೆ ಕರೆದುಕೊಂಡು ಹೋಗಿರುವುದಲ್ಲದೇ, ಠಾಣೆಯಲ್ಲಿ ಎಲ್ಲರನ್ನೂ ವಿವಸ್ತ್ರಗೊಳಿಸಿ ಸೆಲ್ ಒಳಗೆ ಹಾಕಿ ಬೆದರಿಕೆ ಹಾಕಿದ್ದಾರೆ ಎಂದು ಮದುಮಗ ರಾಜೇಶ್‌ ಎಂಬವರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಸಿಬ್ಬಂದಿ ದೂರಿನ ಸಾರಾಂಶ…
ಜಯರಾಮ ನಾಯ್ಕ ಎಲ್‌ (27) ಇವರು ಕೋಟ ಪೊಲೀಸ್‌‌ ಠಾಣೆಯಲ್ಲಿ ಕಾನ್ಸ್‌‌ಟೇಬಲ್‌‌ ಆಗಿ ಕೆಲಸ ಮಾಡಿಕೊಂಡಿದ್ದು, ಡಿ.27ರಂದು ಇವರನ್ನು ಠಾಣಾ ಮೀಸಲು ಕರ್ತವ್ಯಕ್ಕೆ ನೇಮಿಸಿದ್ದರು. ಅದರಂತೆ ಕರ್ತವ್ಯ ಮುಗಿಸಿ ವಿಶ್ರಾಂತಿಯಲ್ಲಿರುವ ಸಂದರ್ಭ ಠಾಣಾ ಪೊಲೀಸ್‌‌ ಉಪನಿರೀಕ್ಷಕ ಸಂತೋಷ್‌‌ ಬಿ.ಪಿ ಅವರು ರಾತ್ರಿ 10.45ರ ಸುಮಾರಿಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎನ್ನುವವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಏರು ಧ್ವನಿಯಲ್ಲಿ ಡಿಜೆ ಸೌಂಡ್ ಹಾಕಿ, ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ, ನೃತ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಪರಿಶೀಲನೆಗಾಗಿ ಜಯರಾಮ ನಾಯ್ಕ ಅವರು ಇಲಾಖಾ ಜೀಪಿನಲ್ಲಿ ಪಿಎಸ್‌‌ಐ ಸಂತೋಷ್‌‌‌ ಅವರೊಂದಿಗೆ ರಾತ್ರಿ 11.10ರ ಸುಮಾರಿಗೆ ಸ್ಥಳಕ್ಕೆ ಹೋದಾಗ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತು ಇತರರು ಡಿಜೆ ಸೌಂಡ್ ಅನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಅವರು ಪಿಎಸ್‌ ಅವರಲ್ಲಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು, ಡಿಜೆ ಸೌಂಡನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು, 112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹ ಆರೋಪಿತರು ಉಡಾಫೆಯಿಂದ ಮಾತನಾಡಿದ್ಧಾರೆ ಎಂದಿದ್ಧಾರೆ. ಈ ವೇಳೆ ಪಿಎಸ್‌ಐ ಅವರು ಡಿಜೆ ಸೌಂಡನ್ನು ಕಡಿಮೆ ಮಾಡುವಂತೆ ತಿಳಿಸಿದಾಗ, ಆರೋಪಿತರು ಗುಂಪು ಕಟ್ಟಿಕೊಂಡು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿಎಸ್‌ಐ ಅವರ ಬಳಿ ಬಂದು, ನೀವು ಏನು ಮಾಡುತ್ತೀರಾ ನಾವು ಡಿಜೆ ಸೌಂಡನ್ನು ಬಂದ್‌ ಮಾಡುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿ, ಸಮವಸ್ತ್ರದಲ್ಲಿದ್ದ ಪಿಎಸ್‌‌‌ಐ ಅವರನ್ನು ದೂಡಿದ್ದಾರೆ. ಈ ವೇಳೆ ಜಯರಾಮ ನಾಯ್ಕ ಅವರು ಡಿಜೆ ಅನ್ನು ಬಂದ್‌ ಮಾಡಲು ಹೋದಾಗ ಆರೋಪಿತರು ಜಯರಾಮ ನಾಯ್ಕ ಅವರನ್ನು ಸುತ್ತುವರಿದು ದೊಣ್ಣೆಯಿಂದ ಕೈಗೆ ಹೊಡೆದು, ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ಧಾರೆ ಎಂದು ಪೊಲೀಸ್‌ ಸಿಬ್ಬಂದಿ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಎರಡು ದೂರಿನ ಬಗ್ಗೆ ಕೋಟ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.