ಕರಾವಳಿ

ಕೊರಗ ಸಮುದಾಯದವರ ಮೇಲೆ ಪೊಲೀಸರ ದುರ್ವರ್ತನೆ ಸಹಿಸಲು ಅಸಾಧ್ಯ, ಇಂತ ಘಟನೆ ಮರುಕಳಿಸಬಾರದು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟ ಕೊರಗ ಸಮುದಾಯದ ಮದುವೆ ಮನೆಗೆ ಮೆಹೆಂದಿ ಸಂದರ್ಭದಲ್ಲಿ ನುಗ್ಗಿ ಮದುಮಗನೂ ಸೇರಿದಂತೆ ಹಲವರ ಮೇಲೆ ಲಾಠಿ ಪ್ರಹಾರ ನಡೆಸಿರುವ ಪೊಲೀಸರ ಅಮಾನವೀಯ ಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಇಂಥಹ ದುರ್ವರ್ತನೆಯನ್ನು  ಸಹಿಸಲು ಅಸಾಧ್ಯ.
ಮೆಹೆಂದಿ ಕಾರ್ಯಕ್ರಮದಲ್ಲಿ ಡಿ.ಜೆ. ಹಾಕಿರುವ
ನೆಪವೊಡ್ಡಿ, ಆಕ್ಷೇಪ ವ್ಯಕ್ತಪಡಿಸಿ ಅನಗತ್ಯ ಲಾಠಿ ಚಾರ್ಜ್ ಮಾಡಿರುವ ಪೊಲೀಸರು ಮತ್ತು ಕರ್ತವ್ಯದಲ್ಲಿದ್ದ ಸಬ್ಇನ್ಸ್‌ಪೆಕ್ಟರ್ ವಿರುದ್ಧ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವೆ ಶೋಭಾ ಕರಂದ್ಲಾಜೆಯವರು ಸೂಚಿಸಿದ್ದು, ಅವರ ಸೂಚನೆಯ ಮೇರೆಗೆ ಸಬ್ ಇನ್ಸ್‌ಪೆಕ್ಟರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ ಹಾಗೂ 5 ಸಿಬ್ಬಂದಿಗಳನ್ನು ಠಾಣೆಯಿಂದ ವರ್ಗಾಯಿಸಲಾಗಿದೆ.

ಇಂತಹ ಘಟನೆಗಳು ಪುನಃ ಮರುಕಳಿಸಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನೆ ಹಿನ್ನೆಲೆ..
ಉಡುಪಿ‌ ಜಿಲ್ಲೆ ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಡಿ.27 ಸೋಮವಾರ ರಾತ್ರಿ‌ ರಾಜೇಶ್ ಎನ್ನುವರ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿತ್ತು. ಕಾಲನಿಯಲ್ಲಿನ ಸಮುದಾಯದವರು ಮತ್ತು ಗೆಳೆಯರು ಆಮಂತ್ರಿತರಾಗಿದ್ದು ಎಲ್ಲರೂ ಈ ಮೆಹೆಂದಿ ಶಾಸ್ತ್ರಕ್ಕೆ ಬಂದಿದ್ದರು. ಡಿಜೆ ವ್ಯವಸ್ಥೆಯೂ ಇದ್ದು ರಾತ್ರಿ 9.30ರಿಂದ ಊಟ ವ್ಯವಸ್ಥೆ ಮಾಡಲಾಗಿತ್ತು. 10 ಗಂಟೆಯ ಬಳಿಕ ಪೊಲೀಸ್ 112 ವಾಹನ ಆಗಮಿಸಿ ಡಿಜೆ ಶಬ್ಧ ತೆಗೆಯುವಂತೆ ಸೂಚಿಸಿದ್ದು ಕೆಲವೇ ಕ್ಷಣಗಳಲ್ಲಿ ಬಂದ ಕೋಟ ಪಿಎಸ್ಐ ಸಂತೋಷ್ ಬಿ.ಪಿ ಹಾಗೂ ಇತರ ಕೆಲ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿದ್ದರು ಎಂದು ಆರೋಪಿಸಲಾಗಿತ್ತು.

Comments are closed.