ಕರ್ನಾಟಕ

ಆನ್‌ಲೈನ್‌ ಜೂಜು, ಬೆಟ್ಟಿಂಗ್ ನಿಷೇಧ: ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

Pinterest LinkedIn Tumblr

ಬೆಂಗಳೂರು: ಆನ್‌ಲೈನ್‌ ಗ್ಯಾಂಬ್ಲಿಂಗ್‌ ಮತ್ತು ಬೆಟ್ಟಿಂಗ್‌ ನಿಷೇಧಿಸಲು ರಾಜ್ಯ ಸರ್ಕಾರ ಜಾರಿಗೆ ತಂದ ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯ್ದೆ-2021ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಆಲ್‌ ಇಂಡಿಯಾ ಗೇಮಿಂಗ್‌ ಫೆಡರೇಷನ್‌ ಮತ್ತಿತರ ಕಂಪನಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ಪೂರ್ಣಗೊಳಿಸಿದ್ದು ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿದ್ದಾರೆ.

ಅರ್ಜಿದಾರರ ಪರ ವಾದ ಮಂಡಿಸಿದ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನುಸಿಂಘ್ವಿ, ಗೇಮ್‌ ಆಫ್‌ ಚಾಯ್ಸ ಮತ್ತು ಗೇಮ್‌ ಆಫ್‌ ಸ್ಕಿಲ್‌ ನಡುವೆ ವ್ಯತ್ಯಾಸವಿದೆ. ಗೇಮ್‌ ಆಫ್‌ ಚಾನ್ಸ್‌ ಅನ್ನು ನಿರ್ಬಂಧಿಸಲು ಸರ್ಕಾರಕ್ಕೆ ಎಲ್ಲ ಅಧಿಕಾರವಿದೆ. ಆದರೆ ಕೌಶಲ್ಯದ ಆಟಗಳನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಾದಿಸಿದರು.

ಹಿರಿಯ ವಕೀಲ ಮುಕುಲ್‌ ರೋಹಟಗಿ, ಗ್ಯಾಂಬ್ಲಿಂಗ್‌ ಮತ್ತು ಗೇಮ್‌ ಆಫ್‌ ಚಾನ್ಸ್‌ ಅನ್ನು ನಿರ್ಬಂಧಿಸಲು ಕಾನೂನಿಗೆ ತಿದ್ದುಪಡಿ ತಂದು ಅದರಡಿ ಕೌಶಲ್ಯದ ಆಟವನ್ನೂ ನಿಷೇಧಿಸುತ್ತಿರುವ ಸರ್ಕಾರದ ಕ್ರಮ ಏಕಪಕ್ಷೀಯ ಹಾಗೂ ಸಂವಿಧಾನಬಾಹಿರವಾಗಿದೆ ಎಂದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಯಾವುದೇ ರೀತಿಯಾಗಿಯೂ ಗೊತ್ತಿಲ್ಲದ ಫಲಿತಾಂಶಕ್ಕಾಗಿ ಬೆಟ್ಟಿಂಗ್‌ ಮೂಲಕ ಹಣವನ್ನು ಬಾಜಿ ಕಟ್ಟುವುದು ಕೌಶಲ್ಯದ ಕ್ರೀಡೆಯಾಗುತ್ತದೆ. ಅಂತಹ ಆನ್‌ ಲೈನ್‌ ಗೇಮ್‌ಗಳನ್ನು ನಿರ್ಬಂಧಿಸುವುದೇ ಕರ್ನಾಟಕ ಪೊಲೀಸ್‌ ಕಾಯ್ದೆ ತಿದ್ದುಪಡಿಯ ಉದ್ದೇಶವಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.

Comments are closed.