ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಕ್ರಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ‘ಪುನೀತ್ ರಾಜಕುಮಾರ್’ ಎಂದು ನಾಮಕರಣ ಮಾಡುವ ಮೂಲಕ ಅಗಲಿದ ಪುನೀತ್ ಅವರಿಗೆ ಅರಣ್ಯ ಇಲಾಖೆ ವಿಶೇಷ ಗೌರವ ಸಲ್ಲಿಸಿದೆ.

ಸಕ್ರೆಬೈಲು ಆನೆ ಬಿಡಾರದಲ್ಲಿ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯಕ್ರಮ ಇಂದು (ನ.10) ನಡೆದಿದ್ದು ತಾಯಿ ನೇತ್ರಾ ಆನೆಯಿಂದ ಮರಿಯನ್ನು ಬೇರ್ಪಡಿಸಲಾಗುತ್ತಿದೆ ಈ ವೇಳೆ ಮರಿಯಾನೆಗೆ ಪುನೀತ್ ಹೆಸರಿಟ್ಟು ನಾಮಕರಣ ಮಾಡಲಾಗಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ (ಸೆ.1) ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಜಿಲ್ಲೆಗೆ ಆಗಮಿಸಿದ್ದ ಅಪ್ಪು ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದ್ದರು. ಈ ವೇಳೆ ಪುನೀತ್ ರಾಜ್ ಕುಮಾರ್ ಈ ಮರಿ ಆನೆಯನ್ನು ಮುದ್ದಿಸಿದ್ದರು. ಮಾತ್ರವಲ್ಲದೆ ಇಲ್ಲಿನ ಅಧಿಕಾರಿಗಳು ಸಿಬ್ಬಂದಿಗಳ ಜೊತೆ ಬೆರೆತಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರಿಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಿದ್ದಾರೆ.

ಈ ತನಕ ದೇವರ ಹೆಸರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಹೆಸರನ್ನು ಮರಿ ಆನೆಗಳಿಗೆ ಇಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮರಿ ಆನೆಗೆ ಚಿತ್ರನಟರೊಬ್ಬರ ಹೆಸರನ್ನು ಇಡಲಾಗಿದೆ ಎಂದು ತಿಳಿದುಬಂದಿದೆ.
ವಿಶೇಷವಾಗಿ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಂಬ ಖ್ಯಾತಿಗೆ ಪಾತ್ರವಾದ ಸಕ್ರೆಬೈಲು ಗಾಜನೂರು ಅಣೆಕಟ್ಟೆಯ ಸಮೀಪದಲ್ಲಿದೆ. ಈ ಶಿಬಿರದಲ್ಲಿ ಆನೆಗಳ ತರಬೇತಿ ಹಾಗೂ ಪ್ರವಾಸಿಗರಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಈ ಬಿಡಾರದಲ್ಲಿ ಆನೆಗಳು ತಮ್ಮ ಪುಟ್ಟ ಮರಿಗಳೊಂದಿಗೆ ನೀರಿನಲ್ಲಿ ಸ್ನಾನ ಮಾಡುವುದನ್ನು ನೋಡುವುದೇ ಸೊಬಗು. ಪ್ರತಿ ದಿನವೂ ಬೆಳಿಗ್ಗೆ 8 ರಿಂದ 11ರವರೆಗೆ ಪ್ರವಾಸಿಗರಿಗೆ ಈ ಶಿಬಿರ ತೆರೆದಿರುತ್ತದೆ.
Comments are closed.