(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅನಿವಾಸಿ ಭಾರತೀಯ ಉದ್ಯಮಿ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಬುಧವಾರ ಜಿಲ್ಲೆಗೆ ಆಗಮಿಸಿದ್ದು ಸಾಸ್ತಾನ ಟೋಲ್ ಫ್ಲಾಜಾ ಬಳಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಹಿತೈಷಿಗಳು ಕಾರು ರ್ಯಾಲಿ ಮೂಲಕ ಕರೆದುತಂದರು.


ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಪತ್ನಿ ರೂಪಾಲಿ ಪಿ. ಶೆಟ್ಟಿಯವರೊಂದಿಗೆ ಆಗಮಿಸಿದ ಅವರನ್ನು ದೇವಳದ ವತಿಯಿಂದ ಸ್ವಾಗತಿಸಿದ್ದು ಅರ್ಚಕರ ಮೂಲಕ ಪೂಜೆ ನೆರವೇರಿಸಲಾಯಿತು. ದೇವಳದ ಹಿರಿಯ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಅರ್ಚಕರಾದ ಮುರಾರಿ ಉಪಾಧ್ಯಾಯ ಅವರು ದೇವಸ್ಥಾನದ ವತಿಯಿಂದ ಗೌರವಿಸಿದರು.

ವಕ್ವಾಡಿ ನಿವಾಸದಲ್ಲಿ ಸಂಭ್ರಮ….
ದೇವಸ್ಥಾನದಿಂದ ಮನೆಗೆ ಆಗಮಿಸಿದ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ತಂದೆ-ತಾಯಿ ಹಿರಿಯರ ಆಶಿರ್ವಾದ ಪಡೆದ ಅವರನ್ನು ಕುಂದಾಪುರ ಯುವ ಬಂಟರ ಸಂಘ, ವಕ್ವಾಡಿಯ ಜನತೆ, ಹಿತೈಷಿಗಳು, ಕುಟುಂಬಿಕರು, ಸ್ನೇಹಿತರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್, ಯುವ ಮೆರಿಡಿಯನ್ ಸಂಸ್ಥೆ ಪಾಲುದಾರರಾದ ಬೈಲೂರು ಉದಯ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಉದ್ಯಮಿ ಸುಧೀರ್ ಕುಮಾರ್ ಶೆಟ್ಟಿ ಮಾರ್ಕೋಡು, ವೈದ್ಯ ಡಾ. ಸುಧಾಕರ ನಂಬಿಯಾರ್, ಪ್ರವೀಣ್ ಕುಮಾರ್ ಶೆಟ್ಟಿಯವರ ತಂದೆ ಕಾವಡಿ ನಾರಾಯಣ ಶೆಟ್ಟಿ, ತಾಯಿ ಸರೋಜಿನಿ ಶೆಟ್ಟಿ ಸಾರ್ಕಲ್ಲುಮನೆ, ಮಾವ ಭಾಸ್ಕರ ಶೆಟ್ಟಿ, ಅತ್ತೆ ಪ್ರೇಮಾ ಶೆಟ್ಟಿ, ಪತ್ನಿ ರೂಪಾಲಿ ಶೆಟ್ಟಿ ಇದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಪ್ರವೀಣ್ ಕುಮಾರ್ ಶೆಟ್ಟಿಯವರ ಹಿತೈಷಿಗಳಾದ ಸಣಗಲ್ ಮನೆ ಪ್ರವೀಣ್ ಕುಮಾರ್ ಶೆಟ್ಟಿ, ಕೀರ್ತಿ ಶೆಟ್ಟಿ, ಸಂದೇಶ್ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ರಘು ಶೆಟ್ಟಿ, ವಿ.ಕೆ. ಶೆಟ್ಟಿ, ಅಶೋಕ್ ಪೂಜಾರಿ ಸಂಯೋಜಿಸಿದ್ದರು. ದಿಯಾ ಪಿ. ಶೆಟ್ಟಿ ಪ್ರಾರ್ಥಿಸಿದರು. ಅಧ್ಯಾಪಕ ವೇಣುಗೋಪಾಲ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಊರಿನ ಪರವಾಗಿ ಅಧ್ಯಾಪಕ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅರ್ಹ ವ್ಯಕ್ತಿಗೆ ಪ್ರಶಸ್ತಿ ಲಭಿಸಿದೆ: ಆನಂದ ಸಿ. ಕುಂದರ್
ಅರ್ಹ ವ್ಯಕ್ತಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸದ್ದು ನಿಜಕ್ಕೂ ಸಂತಸದ ವಿಚಾರ. ಕಷ್ಟ, ಪರಿಶ್ರಮ, ಅನುಭವದ ಹಿನ್ನೆಲೆಯಲ್ಲಿ ಅವರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಸಮಾಜದಲ್ಲಿ ಮೇಲೆ ಬಂದ ವ್ಯಕ್ತಿ ತನ್ನಗಿಂತ ಕೆಳಗಿನವರ ಮೇಲಿನ ಕಾಳಜಿ ಇಟ್ಟರೆ ಅವರನ್ನು ಭಗವಂತ ಕಾಯುತ್ತಾನೆ. ದುಬೈನಲ್ಲಿ, ಜಾರ್ಜಿಯಾ ಹಾಗೂ ಊರಿನಲ್ಲಿ ಹೋಟೆಲ್ ಉದ್ಯಮ ನಡೆಸಿ ಯಶಸ್ಸು ಪಡೆದು ತನ್ನೂರು, ಊರ ಜನ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಅವರನ್ನು ಜನರು ಪ್ರೀತಿಸುತ್ತಿದ್ದಾರೆ. ಕೊರೋನಾ ಸಮಯದಲ್ಲಿ ಅವರು ಮಾಡಿದ ಜನಪರ ಕಾರ್ಯ ಅವರ ಯೋಗ್ಯ ವ್ಯಕ್ತಿತ್ವ ತೋರಿಸುತ್ತದೆ. ಅವರ ಕಾರ್ಯಕ್ಕೆ ಪದ್ಮಶ್ರೀ, ಪದ್ಮಭೂಷಣದಂತಹ ಪ್ರಶಸ್ತಿ ಸಿಗಲಿ ಎಂದು ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಹಾರೈಸಿದರು.

ಪ್ರವೀಣರಿಗೆ ಸಾಮಾನ್ಯ ಜನರ ಕಷ್ಟದ ಅರಿವಿದೆ: ಉದಯ್ ಕುಮಾರ್ ಶೆಟ್ಟಿ
ಜನರ ಕಷ್ಟ ಸುಖಗಳಿಗೆ ಭಾಗಿಯಾಗುವ ವ್ಯಕ್ತಿ ಪ್ರವೀಣ್ ಕುಮಾರ್ ಶೆಟ್ಟಿ. ಕಠಿಣ ಪರಿಶ್ರಮದಿಂದ ಮೇಲೆ ಬಂದಿದ್ದರಿಂದ ಇಂದಿಗೂ ಅವರಿಗೆ ಸಾಮಾನ್ಯ ಜನರ ಕಷ್ಟದ ಅರಿವಿದೆ. ದೇಶ ವಿದೇಶದಲ್ಲೂ ಉದ್ಯಮವಿದ್ದರೂ ಕೂಡ ವಕ್ವಾಡಿಯಲ್ಲಿನ ಉದ್ಯಮದ ಬಗ್ಗೆ ಇಟ್ಟಿರುವ ಅಪಾರ ಪ್ರೀತಿ ಅವರು ಊರಿನ ಮೇಲಿಟ್ಟ ಅಭಿಮಾನಕ್ಕೆ ಸಾಕ್ಷಿ. ವಕ್ವಾಡಿಯ ಅಭಿವೃದ್ದಿ ಕಾರ್ಯಕ್ಕೆ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ದಿವಂಗತ ವಿ.ಕೆ ಮೋಹನ್ ಜೋಡೆತ್ತುಗಳಂತೆ ದುಡಿದವರು ಎಂದು ಯುವ ಮೆರಿಡಿಯನ್ ಆಡಳಿತ ಪಾಲುದಾರ ಬೈಲೂರು ಉದಯ್ ಕುಮಾರ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದೆಯೂ ಸಮಾಜ ಸೇವೆ ಮುಂದುವರಿಯುತ್ತೆ: ಪ್ರವೀಣ್ ಕುಮಾರ್ ಶೆಟ್ಟಿ
ಮುಂದಿನ ದಿನದಲ್ಲಿ ಯಾವುದೇ ಅಭಿನಂದನೆ ಕಾರ್ಯಕ್ರಮದಲ್ಲಿ ಹೂ, ಹಾರ ಬೇಡ. ಅದರ ಬದಲು ಪುಸ್ತಕ ಅಥವಾ ಶಾಲು ನೀಡಿದರೆ ಉಪಯೋಗಕ್ಕೆ ಬರುತ್ತದೆ. ಕಳೆದ 30 ವರ್ಷದಿಂದ ದುಬೈನಲ್ಲಿ ಉದ್ಯಮ ಸ್ಥಾಪಿಸಿ ಹೊರನಾಡು ಕನ್ನಡಿಗನಾಗಿದ್ದು ಕನ್ನಡಿಗರಿಗೆ ಅಗತ್ಯ ಸಹಾಯ ಮಾಡುತ್ತಿರುವೆ. ದೇವರು ಆರೋಗ್ಯ ಹಾಗೂ ಸಂಪಾದನೆ ತಾಕತ್ತು ನೀಡಿದರೆ ಮುಂದೆಯೂ ಕೂಡ ನನ್ನ ಕೈಲಾದಷ್ಟು ಸೇವೆ ಮಾಡುವುದು ನನ್ನ ಇಚ್ಚೆ. ಈ ಪ್ರಶಸ್ತಿಯಿಂದ ಜವಬ್ದಾರಿ ಮತ್ತಷ್ಟು ಹೆಚ್ಚಿದೆ. ಯಾವುದೇ ಕೆಲಸ ಮಾಡುವಾಗ ಹಣ ಮುಖ್ಯ ಅಲ್ಲ. ನಾವು ಬೆಳೆದು ಬಂದ ಹಾದಿಯ ಬಗ್ಗೆ ನೆನಪು ಅಗತ್ಯ. ನನಗೆ ಸಿಕ್ಕ ಪ್ರಶಸ್ತಿ ಊರಿಗೆ ಸಿಕ್ಕ ಗೌರವ ಎನ್ನುವುದು ನನ್ನ ಅಭಿಪ್ರಾಯ ಎಂದು ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು.
ಪುನೀತ್ ಇದ್ದಿದ್ದರೆ ತುಂಬಾ ಖುಷಿ ಪಡ್ತಿದ್ರು: ಪ್ರವೀಣ್ ಕುಮಾರ್ ಶೆಟ್ಟಿ
ಉದ್ಯಮಿ ದಿವಂಗತ ವಿ.ಕೆ ಮೋಹನ್ ಅವರಿಂದ ಕಳೆದ 20 ವರ್ಷದಿಂದ ಪುನೀತ್ ರಾಜಕುಮಾರ್ ಆತ್ಮೀಯರಾಗಿದ್ದರು. ಅವರ ನಿಧನದಿಂದ ಅತೀವ ನೋವಾಗಿದೆ. ಅವರಿದ್ದಿದ್ದರೆ ನನಗೆ ಪ್ರಶಸ್ತಿ ಲಭಿಸಿದಾಗ ಅತ್ಯಂತ ಹರ್ಷ ಪಡುತ್ತಿದ್ದರು. ಮಂಗಳವಾರ ಅವರ ಮನೆಗೆ ಪತ್ನಿ ಸಮೇತ ತೆರಳಿ ಕುಟುಂಬಿಕರೊಂದಿಗೆ ಇದ್ದೆವು ಎಂದರು.
Comments are closed.