ಕರ್ನಾಟಕ

ಅಯೋಧ್ಯೆಯಲ್ಲಿನ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕರ್ನಾಟಕದ ಗ್ರಾನೈಟ್‌!

Pinterest LinkedIn Tumblr

ದೊಡ್ಡಬಳ್ಳಾಪುರ: ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ತಳಪಾಯಕ್ಕಾಗಿ ಕನ್ನಡ ನೆಲದ ಗ್ರಾನೈಟ್ ಶಿಲೆಗಳು ಬಳಕೆಯಾಗಲಿದೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಸಾದಹಳ್ಳಿ ಕಲ್ಲುಕ್ವಾರಿಗಳಿಂದ 300 ಲೋಡ್‌ ಬಿಳಿ ಹಾಗೂ ಗುಲಾಬಿ ಬಣ್ಣದ ಗ್ರಾನೈಟ್‌ ಶಿಲೆಗಳು ರವಾನೆಯಾಗಲಿವೆ. ಇದಕ್ಕಾಗಿ ಕ್ವಾರಿಗಳಲ್ಲಿ ನಿತ್ಯ ಗ್ರಾನೈಟ್‌ ಶಿಲಾ ಪದರಗಳ ಬೇರ್ಪಡಿಸುವಿಕೆ, ಕತ್ತರಿಸುವಿಕೆ ಹಾಗೂ ಹೊಳಪು ಕೊಡುವ ಕಾರ‍್ಯಗಳಲ್ಲಿ 800ಕ್ಕೂ ಅಧಿಕ ಕಾರ್ಮಿಕರು ತೊಡಗಿದ್ದಾರೆ. ಬರುವ ಮೇ ತಿಂಗಳ ಒಳಗೆ ಶಿಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಅಯೋಧ್ಯೆಗೆ ತಲುಪಿಸುವ ಯೋಜನೆಯಿದೆ ಎಂಬ ಮಾಹಿತಿ ಇದೆ.

ಸಾದಹಳ್ಳಿಯ ಶ್ರೀಹನುಮಾನ್‌ ಗ್ರಾನೈಟ್‌ ಸಂಸ್ಥೆಯು ಈ ಶಿಲೆಗಳನ್ನು ಪೂರೈಸುತ್ತಿದ್ದು, ವಿವೇಕಾನಂದ ಸೇವಾ ಸಮಿತಿ ಸಹಯೋಗದಲ್ಲಿ ಮೊದಲ ದಿನ ಆರು ಲಾರಿಗಳಲ್ಲಿ ಶಿಲೆ ಸಾಗಾಟಕ್ಕೆ ಚಾಲನೆ ನೀಡಲಾಯಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್‌ ಬಳಿ ಶಿಲೆಗಳ ಪೂಜೆ ಮತ್ತು ಅವುಗಳನ್ನು ಹೊತ್ತ ಲಾರಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥ, ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಶಿಲಾಪೂಜೆ ನೆರವೇರಿಸಿ ಲಾರಿಗಳಿಗೆ ಹಸಿರು ನಿಶಾನೆ ತೋರಿದರು.

ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್‌ ಎಂ., ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ತಿಪ್ಪೇಸ್ವಾಮಿ, ವಿಶ್ವ ಹಿಂದು ಪರಿಷತ್‌ನ ಬಿ.ಎನ್‌. ಮೂರ್ತಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ವಿಹಿಂಪ ಬೆಂಗಳೂರಿನ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಆರ್‌ಎಸ್‌ಎಸ್‌ನ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಶಾಸಕ ಎಸ್‌.ಆರ್‌.ವಿಶ್ವನಾಥ್‌, ಆನಂದ ಗುರೂಜಿ, ಸ್ಥಳೀಯ ಶಾಸಕ ನಿಸರ್ಗ ನಾರಾಯಣ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

ಗ್ರಾನೈಟ್‌ ಹೊತ್ತ ಲಾರಿಗಳು ಸಾಗುವ ಮಾರ್ಗ ಮಧ್ಯೆ ದೇವನಹಳ್ಳಿ, ಚಿಕ್ಕಬಳ್ಳಾಪುರ, ಗೌರಿಬಿದನೂರು ಮೊದಲಾದೆಡೆ ವಿಶ್ವಹಿಂದು ಪರಿಷತ್‌, ಬಜರಂಗದಳ ಸೇರಿದಂತೆ ಅನೇಕ ಸಂಘಟನೆಗಳಿಂದ ಪೂಜಿಸಿ ಬೀಳ್ಕೊಡಲಾಯಿತು.

 

Comments are closed.