ಕರಾವಳಿ

ರಾಜ್ಯಾದ್ಯಂತ 1-5ನೇ ತರಗತಿ‌ ಆರಂಭ:‌ ಖುಷಿಖುಷಿಯಾಗಿ ಬಂದ ಚಿಣ್ಣರಿಗೆ ಶಾಲೆಯಲ್ಲಿ ಅದ್ಧೂರಿ ಸ್ವಾಗತ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಬೆಂಗಳೂರು/ ಉಡುಪಿ: ರಾಜ್ಯಾದ್ಯಂತ ಸೋಮವಾರದಿಂದ 1 ರಿಂದ 5 ನೇ ತರಗತಿಯ ಮಕ್ಕಳಿಗೂ ಶಾಲಾರಂಭಗೊಂಡಿದ್ದು, ಆ ಪ್ರಯುಕ್ತ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಆತ್ನೀಯವಾಗಿ ಬರಮಾಡಿಕೊಳ್ಳಲಾಯಿತು.

ಉಡುಪಿ‌ ಜಿಲ್ಲೆಯ ಎಲ್ಲಾ ವಲಯದ ಕ್ಷೇತ್ರ ಶಿಕ್ಷಣ ಇಲಾಖೆಯಡಿ ಬರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಸರಕಾರ ರೂಪಿಸಿದ ಕೊರೋನಾ ತಡೆಗಟ್ಟುವಿಕೆಯ ನಿಯಮಾವಳಿಯಂತೆ ಶಿಕ್ಷಕರು ಹಾಗೂ ಇಲಾಖೆ ಸೂಕ್ತ ಕ್ರಮಕೈಗೊಂಡು ವಿದ್ಯಾರ್ಥಿಗಳನ್ನು ಆದರದಿಂದ ಬರಮಾಡಿಕೊಂಡ ದೃಶ್ಯ ಕಂಡುಬಂತು.

ಬಹುತೇಕ ಎಲ್ಲಾ ಶಾಲೆಯಲ್ಲಿ ಶಾಲೆಯನ್ನು ಸಿಂಗರಿಸಿ, ಮಕ್ಕಳನ್ನು ಹೂವು ನೀಡಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.
ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಶಾಲೆ ಕಡೆಗೆ ಹೆಜ್ಜೆಯಿಟ್ಟ ಪುಟಾಣಿ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸಮಿತಿಯವರು ಹಾಗೂ ಊರವರು ಶಾಲೆಯನ್ನು ತಳಿರು ತೋರಣಗಳು, ಬಲೂನ್, ಬಾಳೆ ಗಿಡಗಳೆಲ್ಲವನ್ನು ಕಟ್ಟಿ ಅಲಂಕರಿಸಿದ್ದು ಹಲವೆಡೆ ಕಂಡುಬಂತು.‌‌ ಹಲವೆಡೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಮಿತಿಯವರು ಹೂವನ್ನು ನೀಡಿ, ಸ್ವಾಗತಿಸಿದರು. ಮಕ್ಕಳು ಸಹ ಲವಲವಿಕೆಯಿಂದಲೇ ಶಾಲೆಯತ್ತ ಬರುತ್ತಿದ್ದರು.

ತಲ್ಲೂರಿನಲ್ಲಿ ಚಿಣ್ಣರಿಗೆ ಅದ್ಧೂರಿ ಸ್ವಾಗತ, ಶಾಲಾ ಪ್ರಾರಂಭೋತ್ಸವ:
ಬಳಿಕ ನಡೆದ ಶಾಲಾ ಪ್ರಾರಂಭೋತ್ಸವವನ್ನು ತಲ್ಲೂರು ಗ್ರಾ.ಪಂ. ಅಧ್ಯಕ್ಷೆ ಭೀಮವ್ವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ತಲ್ಲೂರು ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು ಅವರು, ಬಹಳ ಸಮಯದ ಬಳಿಕ ಶಾಲೆಯಲ್ಲಿ ಮಕ್ಕಳ ಕಲರವ ಆರಂಭಗೊಳ್ಳುತ್ತಿರುವುದು ಸಂತಸದ ಸಂಗತಿ. ಮಕ್ಕಳು ಮನೆಯಲ್ಲಿಯೇ ಜಾಸ್ತಿ ಸಮಯ ಕಳೆದಿರುವುದರಿಂದ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಈ ದಿಸೆಯಲ್ಲಿ ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದವರು ಹೇಳಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ದಾನಿ ದೇವದಾಸ್ ಅವರು ಮಕ್ಕಳಿಗೆ ತಟ್ಟೆ ಹಾಗೂ ಲೋಟವನ್ನು ಕೊಡುಗೆಯಾಗಿ ನೀಡಿದರು. ಶಾಲೆಯನ್ನು ತಳಿರುತೋರಣಗಳಿಂದ ಸಿಂಗರಿಸಿದ್ದು, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿತ್ತು. ಪುಷ್ಪ ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಅಕ್ಷಯ್, ಎಸ್‌ಡಿಎಂಸಿ ಉಪಾಧ್ಯಕ್ಷ ಮನೋಜ್, ಮಾಜಿ ಅಧ್ಯಕ್ಷ ರಮೇಶ್, ಶಿಕ್ಷಕಿ ಜೂಲಿಯಾ ಡಯಾನ, ಅಂಗನವಾಡಿ ಶಿಕ್ಷಕಿಯರಾದ ಜ್ಯೋತಿ, ಗೀತಾ, ಬಾಲವಿಕಾಸ ಅಧ್ಯಕ್ಷೆ ಸುಮಿತ್ರಾ, ಪೋಷಕರು ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕ ವಿಠಲ ಕಾಮತ್ ಸ್ವಾಗತಿಸಿದರು.

Comments are closed.