(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೊಬ್ಬರ್ಯನಕಟ್ಟೆ ಬಳಿ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ವಾಹನ ಪ್ರವೇಶಿಲು ಅನುಕೂಲ ಮಾಡಿಕೊಡಬೇಕು ಎನ್ನುವ ಸಾರ್ವಜನಿಕರ ಆಗ್ರಹದ ಹಿನ್ನೆಲೆ ಕುಂದಾಪುರ ಸಹಾಯಕ ಕಮಿಷನರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಉಡುಪಿ ಡಿಸಿ ಎಂ
ಕೂರ್ಮಾರಾವ್ ಆದೇಶಿಸಿದ್ದರು.

ಕುಂದಾಪುರ ಡಿವೈಎಸ್ಪಿ, ಪುರಸಭೆ ಮುಖ್ಯಾಧಿಕಾರಿ, ಎನ್.ಎಚ್. ಪಿಡಿ, ತಹಶಿಲ್ದಾರ್ ಹಾಗೂ ಆರ್.ಟಿ.ಒ ಸದಸ್ಯರಾಗಿರುವ ಈ ಸಮಿತಿ ಸಭೆ ಇಂದು ಮಿನಿವಿಧಾನಸೌಧದ ಎಸಿಯವರ ಕಚೇರಯಲ್ಲಿ ನಡೆದಿದೆ. ಬಳಿಕ ಸಮಿತಿಯವರು ಸ್ಥಳ ಪರಿಶೀಲನೆಗೆ ಮಧ್ಯಾಹ್ನದ ವೇಳೆ ಬೊಬ್ಬರ್ಯನಕಟ್ಟೆ ಬಳಿ ಆಗಮಿಸಿ ಸಾಧಕ ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ನೆರೆದ ಸಾರ್ವಜನಿಕರು, ಈ ಭಾಗದಲ್ಲಿ 15ಕ್ಕೂ ಅಧಿಕ ಇಲಾಖಾ ಕಚೇರಿಗಳು, ಶಾಲೆಗಳು, ಕಲ್ಯಾಣಮಂಟಪ ಇತ್ಯಾದಿಗಳಿದ್ದು ಜನರ ಓಡಾಟ ನಿರಂತರವಾಗಿರುತ್ತದೆ. ಇಲ್ಲಿ ವಾಹನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರೆ ನಗರಕ್ಕೆ ಬರುವ ವಾಹನಗಳಿಗೂ ಅನುಕೂಲ ಎಂದು ಮನವಿ ಮಾಡಿದರು.
ಮಾಧ್ಯಮಗಳ ಜೊತೆ ಮಾತಾನಾಡಿದ ಸಹಾಯಕ ಕಮಿಷನರ್ ಕೆ. ರಾಜು, ಜಿಲ್ಲಾಧಿಕಾರಿಗಳ ಸಮಿತಿಯ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಬಂದಪಟ್ಟ ತಾಂತ್ರಿಕ ವಿಭಾಗದ ಇಂಜಿನಿಯರ್‌ಗಳಿಂದ ಈ ಬಗ್ಗೆ ಕೂಲಂಕುಷ ವರದಿ ಪಡೆದು ಅದರ ಅನುಸಾರವಾಗಿ ಯಾವ ರೀತಿ ಕ್ರಮಕೈಗೊಳ್ಳಬಹುದೆಂದು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದರು.
ಈ ವೇಳೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ತಹಶಿಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಪಿಎಸ್ಐ ಸದಾಶಿವ ಗವರೋಜಿ, ರಾ.ಹೆದ್ದಾರಿ ಸಂಬಂಧಪಟ್ಟ ಅಧಿಕಾರಿಗಳಿದ್ದರು.
Comments are closed.