ಕರಾವಳಿ

ಸರಕಾರಿ ಶಾಲೆಯನ್ನು ‘ದತ್ತು’ ಪಡೆದ ಇಂಗ್ಲೀಷ್ ಮೀಡಿಯಂ ಶಾಲೆ: ‘ಗುರುಕುಲ’ ಸಂಸ್ಥೆ ಕಾರ್ಯಕ್ಕೆ ಶ್ಲಾಘನೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕಳೆದ ಕೆಲ ವರ್ಷಗಳಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದರೆ ಮತ್ತೆ ಹಲವು ಶಾಲೆಗಳಿಗೆ ಬೀಗ ಬಿದ್ದಿದೆ. ಹೀಗೆ ಮುಚ್ಚುವ ಹಂತ ತಲುಪಿದ್ದ ಬೈಂದೂರು ವಲಯ ವ್ಯಾಪ್ತಿಯ ಸರಕಾರಿ ಶಾಲೆಯೊಂದರ ಸಂಪೂರ್ಣ ಜವಬ್ದಾರಿ ವಹಿಸಿಕೊಂಡು ದತ್ತು ಪಡೆದ ಖಾಸಗಿ ಇಂಗ್ಲೀಷ್ ಮೀಡಿಯಂ ಶಾಲೆಯವರು ಆ ಶಾಲೆಗೆ ಒಂದೊಳ್ಳೆ ಕಾಯಕಲ್ಪ ನೀಡಿದ್ದಾರೆ.

ಶತಮಾನದ ಹೊಸ್ತಿಲಲ್ಲಿರುವ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ತಾಲೂಕಿನ ಕೊಡ್ಲಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹಾಗಾದ್ರೆ ಈ ಶಾಲೆ ಕಥೆ ಏನು ಅಂತಿದ್ದೀರಾ? ಮೂರು ವರ್ಷದ ಹಿಂದೆ 16 ಮಕ್ಕಳಿದ್ರು…ಆದ್ರೆ ಈಗ ಶಾಲೆಯಲ್ಲಿ ಬರೋಬ್ಬರಿ 101 ಮಕ್ಕಳಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆ ಇದೀಗಾ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದಜೇರಿಗೇರಿದ್ದು, ಕಳೆದೆರಡು ವರ್ಷಗಳಿಂದ ಮಕ್ಕಳ ದಾಖಲಾತಿ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ. ಇನ್ನು ಎಲ್.ಕೆ.ಜಿ. ಹಾಗೂ ಯು.ಕೆ.ಜಿ ಗೆ 40ಕ್ಕೂ ಅಧಿಕ ಚಿಣ್ಣರು ದಾಖಲಾಗಿದ್ದಾರೆ. ಇದಕ್ಕೆಲ್ಲಾ ಕಾರಣ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ. ಈ ಶಾಲೆಯ ಹಳೆ ವಿದ್ಯಾಥಿಯೂ ಆಗಿರುವ ಅವರು ಶಾಲೆಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಿದ್ದಾರೆ.

ವಕ್ವಾಡಿಯಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ಎನ್ನುವ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿರುವ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿಯವರು ತಾನು ಕಲಿತ ಶಾಲೆಯ ಸ್ಥಿತಿಯನ್ನು ಗಮನಿಸಿ ಮಕ್ಕಳಿಗೆ ಆಸನದ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಕೌಂಪೌಂಡ್, ನೆಲಕ್ಕೆ ಗುಣಮಟ್ಟದ ಟೈಲ್ಸ್ ಮೊದಲಾದ ಮೂಲಭೂತ ಸೌಕರ್ಯ ಕೊಟ್ಟು ಶಾಲೆಯ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಗುರುಕುಲ‌ ವಿದ್ಯಾ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿಯವರ ಕುಟುಂಬಿಕರು ಹಾಗೂ ಊರಿನವರು ಈ ಮಹಾತ್ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮಾತ್ರವಲ್ಲ ತಮ್ಮ ಗುರುಕುಲ ಶಾಲೆಯಿಂದ ನಾಲ್ವರು ಗೌರವ ಶಿಕ್ಷಕರನ್ನು ಈ ಶಾಲೆಗೆ ನಿಯೋಜಿಸಿದ್ದು ಶಾಲೆಯ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದು ಸಹಕರಿಸಲು ಓರ್ವ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಹೀಗಾಗಿ ಶಾಲೆಯಲ್ಲಿ ಈ ಬಾರಿ ದಾಖಲಾತಿಯೂ ಹೆಚ್ಚಳವಾಗಿದೆ. 1926 ರಲ್ಲಿ ಪ್ರಾರಂಭವಾದ ಕೊಡ್ಲಾಡಿಯ ಕಿರಿಯ ಪ್ರಾಥಮಿಕ ಶಾಲೆಯು ಇನ್ನು 5 ವರ್ಷ ಪೂರೈಸಿದರೆ ಶತಮಾನೋತ್ಸವವನ್ನು ಆಚರಿಸಲಿದೆ. ಕಳೆದ ವರ್ಷದ ಜೂನ್‍ನಲ್ಲಿ ಈ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಮುಂಬಡ್ತಿ ಪಡೆಯಿತು. ಹಾಗಾಗಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲು ಸರಕಾರ ಮುಂದಾಗಬೇಕಿದೆ ಎನ್ನುತ್ತಾರೆ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ.

ಒಂದರಿಂದ 7ನೇ ತರಗತಿಗಳಿರುವ ಈ ಶಾಲೆಯಲ್ಲಿ ಇರುವುದು ಒಂದೇ ಕಟ್ಟಡ. ಆ ಕಟ್ಟಡವೂ ಶಿಥಿಲಗೊಂಡಿದ್ದು ಮೇಲ್ಮಾಡು ಬೀಳುವ ಹಂತ ತಲುಪಿದೆ. ಕಿಟಕಿ ಬಾಗಿಲುಗಳು ದುಸ್ಥಿತಿಯಲ್ಲಿದೆ. ಶಾಲೆಯ ಒಂದೇ ಕಟ್ಟಡದಲ್ಲಿ 3 ತರಗತಿಗಳಿವೆ. ಇನ್ನುಳಿದ ತರಗತಿಗಳಿಗಾಗಿ ಹೊಸ ಕಟ್ಟಡದ ಅಗತ್ಯವಿದೆ. ಈ ಬಗ್ಗೆ ಇಲ್ಲಿನ ಎಸ್‍ಡಿಎಂಸಿ, ಊರವರು, ಇಲಾಖಾ ಅಧಿಕಾರಿಗಳಿಂದ ಮನವಿ ಸಲ್ಲಿಸಿದ್ದು, ಇನ್ನಷ್ಟು ಅನುದಾನ ಮಂಜೂರಾಗಬೇಕಿದೆ. ಆದಷ್ಟು ಬೇಗ ಕಟ್ಟಡ ಮಂಜೂರಾದರೆ ಗ್ರಾಮೀಣ ಭಾಗದ ಸರಕಾರಿ ಶಾಲೆಗೆ ಮತ್ತಷ್ಟು ಚೈತನ್ಯ ಸಿಗಲಿದೆ. ಇದರೊಂದಿಗೆ ಈಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಅಗತ್ಯವೂ ಇದೆ. ಇನ್ನು ಮಕ್ಕಳ ಸಂಖ್ಯೆ ಹೆಚ್ಚಿರುವುದರಿಂದ ಬೆಂಚ್, ಡೆಸ್ಕ್ ಮೊದಲಾದ ಪೀಠೋಪಕರಣಗಳು ಸಹ ಬೇಕಾಗಿವೆ. ಈ ಶಾಲೆಯಲ್ಲಿ ಕಳೆದ ವರ್ಷದವರೆಗೆ ಇಬ್ಬರು ಶಿಕ್ಷಕರಿದ್ದು, ಅದರಲ್ಲಿ ಒಬ್ಬರು ನಿವೃತ್ತಿಯಾಗಿದ್ದಾರೆ. ಈಗ ಇಲ್ಲಿ ಖಾಯಂ ಶಿಕ್ಷಕರಾಗಿರುವುದು ಒಬ್ಬರು ಮಾತ್ರ. ಇನ್ನು ಇಬ್ಬರು ಶಿಕ್ಷಕರ ಬೇಡಿಕೆಯಿದೆ.

ಮುಚ್ಚಲು ಹೊರಟಿದ್ದ ಶಾಲೆಯಲ್ಲೀಗ ಮಕ್ಕಳ ಸಂಖ್ಯೆ ಅಧಿಕವಾಗುವ ಜೊತೆಗೆ ಬಹಳಷ್ಟು ಸುಧಾರಿಸಿಕೊಂಡಿದೆ. ಖಾಸಗಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದರೂ ಕೂಡ ತನ್ನೂರ ಸರಕಾರಿ ಶಾಲೆ ಬಗೆಗಿನ ಸುಭಾಶ್ಚಂದ್ರ ಶೆಟ್ಟಿಯವರ ಪ್ರೀತಿ ನಿಜಕ್ಕೂ ಅಭಿನಂದನಾರ್ಹವಾಗಿದೆ.

ದತ್ತು ಸ್ವೀಕಾರ…
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಡ್ಲಾಡಿ ಇದರ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಹೊತ್ತು ಮೇಲ್ದರ್ಜೆಗೇರಿಸುವಲ್ಲಿ ಶತಪ್ರಯತ್ನ ನಡೆಸಿ ಯಶಸ್ವಿಯಾಗಿರುವ ಗುರುಕುಲ ವಿದ್ಯಾಸಂಸ್ಥೆ ಶಿಕ್ಷಣ ಇಲಾಖೆಯಿಂದ ಶಾಲೆಯನ್ನು ಅಧಿಕೃತವಾಗಿ ದತ್ತು ಸ್ವೀಕಾರ ಮಾಡಿದ್ದಾರೆ. ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ ಮುಂದಿನಮನೆ ಅವರು ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಅವರಿಗೆ ಅನುಮತಿ ಪತ್ರವನ್ನು ನೀಡುವ ಮೂಲಕ ಅಧಿಕೃತವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಲಾಡಿ ಇದನ್ನು ದತ್ತು ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮೂಲಭೂತ ಅವಶ್ಯಕತೆಗಳಾದ ಕಟ್ಟಡ ಹಾಗೂ ಹೆಚ್ಚುವರಿ ಶಿಕ್ಷಕರ ಬೇಡಿಕೆಯನ್ನು ಆದಷ್ಟು ಬೇಗ ಪೂರೈಸಲು ಶಿಕ್ಷಣ ಇಲಾಖೆಗೆ ಮಾಡಿದ ಮನವಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ಆದಷ್ಟು ಬೇಗ ಬೇಡಿಕೆಯನ್ನು ಪೂರೈಸುವುದಾಗಿ ತಿಳಿಸಿದರು. ಸರಳವಾಗಿ ನಡೆದ ದತ್ತು ಸ್ವೀಕಾರ ಸಮಾರಂಭದಲ್ಲಿ ಸಂಯೋಜಕ ನಿತ್ಯಾನಂದ ಶೆಟ್ಟಿ, ಕರುಣಾಕರ ಶೆಟ್ಟಿ, ನಾಗರಾಜಶೆಟ್ಟಿ, ಸುರೇಂದ್ರ ನಾಯಕ್ ಭಾಗವಹಿಸಿದ್ದರು.

ಊರ ಹಿರಿಯರು ದಾನಿಗಳಾದ ಸುಬ್ಬಣ್ಣ ಶೆಟ್ಟಿ ಬಾಂಡ್ಯಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುರುಕುಲ ವಿದ್ಯಾಸಂಸ್ಥೆಯ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಹಾಗೂ ಗುರುಕುಲ ವಿದ್ಯಾಸಂಸ್ಥೆಯ ಸಂಯೋಜಕಿ ವಿಶಾಲಾ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರು, ಎಸ್ಡಿಎಂಸಿ ಅಧ್ಯಕ್ಷ ರತ್ನಾಕರ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಮಡಿವಾಳ, ಶಾಲೆಯ ಅಡುಗೆ ಸಿಬ್ಬಂದಿ ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಾಲೆಯ ಶಿಕ್ಷಕಿ ಅಶ್ರೀತಾ ಕಿಣಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿಯರಾದ ನಿರ್ಮಲಾ ಆಚಾರ್ಯ ಸ್ವಾಗತಿಸಿದರು ಮತ್ತು ಕವಿತಾ ಧನ್ಯವಾದ ಸಮರ್ಪಿಸಿದರು.

 

Comments are closed.