ಕರಾವಳಿ

ಮಂಗಳೂರಿನಲ್ಲಿ 1 ವಾರ ಟ್ರಾಫಿಕ್ ಡ್ರೈವ್: ಇಂದು ಟಿಂಟ್ ಚೆಕ್ ಮೀಟರ್‌‌ನೊಂದಿಗೆ ರಸ್ತೆಗಿಳಿದ ಪೊಲೀಸರು

Pinterest LinkedIn Tumblr

ಮಂಗಳೂರು: ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ 6 ದಿನಗಳ ಕಾಲ ಮಂಗಳೂರಿನಲ್ಲಿ ಪೊಲೀಸ್‌ ಇಲಾಖೆ ಟ್ರಾಫಿಕ್‌ ಡ್ರೈವ್‌‌ ಹಮ್ಮಿಕೊಂಡಿದೆ. ಈ‌ ಹಿನ್ನೆಲೆ ಇಂದು (ಸೆ.27 ಸೋಮವಾರ) ಟಿಂಟ್ ಚೆಕ್ ಮೀಟರ್ ಬಳಸಿ ವಾಹನ ತಪಾಸಣೆ ಮಾಡುತ್ತಿದ್ದಾರೆ.

ಏನಿದು ಟಿಂಟ್ ಚೆಕ್ ಮೀಟರ್…
ಟಿಂಟ್ ಚೆಕ್ ಮೀಟರ್ ಮೂಲಕ ವಾಹನದ ಗಾಜು ಎಷ್ಟು ಪಾರದರ್ಶಕವಾಗಿದೆ ಎನ್ನುವುದನ್ನು ಅಳೆಯಲಾಗುತ್ತದೆ. ಉದಾಹರಣೆಗೆ 60% ಪಾರದರ್ಶಕತೆ ಮಾಪಕದಲ್ಲಿ ತೋರಿಸದರೆ 40% ಟಿಂಟ್ ಇದೆ ಎಂದರ್ಥ. ವಾಹನದ ಗಾಜಿನ ಕಂಪೆನಿಯಲ್ಲಿ ಇರುವುದು ಬಿಟ್ಟು ಹೆಚ್ಚಿನ ಟಿಂಟ್ ಅಳವಡಿಕೆ ಕಾನೂನು ಬಾಹಿರ. ಇದಕ್ಕೆ 500 ರೂ. ದಂಡ ವಿಧಿಸಲಾಗುತ್ತಿದೆ. ನಗರದಲ್ಲಿ ಸೋಮವಾರ ನಡೆದ ಟಿಂಟ್ ವಿರುದ್ಧದ ಕಾರ್ಯಾಚರಣೆ ವೇಳೆ ಹಲವು ಪ್ರಕರಣ ಕಂಡುಬಂದಿದೆ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿವೆ. ಇದರಿಂದಾಗಿ ಅಪಘಾತ, ಸರಕಳ್ಳತನ, ದರೋಡೆ ಸಹಿತ ರಸ್ತೆ ಅಪರಾಧ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ಹಿನ್ನೆಲೆ ಟ್ರಾಫಿಕ್‌ ಡ್ರೈವ್‌ ಹಮ್ಮಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಎನ್‌ ಶಶಿಕುಮಾರ್ ತಿಳಿಸಿದ್ದಾರೆ.

ಈ ಟ್ರಾಫಿಕ್‌ ಡ್ರೈವ್‌ ಸೆ.27ರಿಂದ ಅ.2ರವರೆಗೆ ಒಂದು ವಾರಗಳ ಕಾಲ ನಡೆಯಲಿದ್ದು, ಪೊಲೀಸರು ನಿರಂತರವಾಗಿ ಪ್ರತಿದಿನಕ್ಕೆ ಒಂದೊಂದು ಆದ್ಯತೆ ನೀಡಿ ಟ್ರಾಫಿಕ್‌ ಡ್ರೈವ್‌ ಮಾಡುತ್ತೇವೆ. ಸೋಮವಾರದಂದು ಟಿಂಟ್‌ ವಿರುದ್ದ ಕಾರ್ಯಾಚರಣೆ ನಡೆದಿದ್ದು ಸೆ.28ರಂದು ನಂಬರ್‌ ಪ್ಲೇಟ್‌ಗಳ ಕುರಿತು ಕಾರ್ಯಾಚರಣೆ ನಡೆಯಲಿದೆ. ಸೆ.29ರಂದು ಹೆಲ್ಮೆಟ್‌ ಬಳಕೆ ವಿಚಾರದಲ್ಲಿ ಕಾರ್ಯಾಚರಣೆ. ಸೆ.30ರಂದು ಇನ್ಶುರೆನ್ಸ್‌ ತಪಾಸಣೆ, ಅ.1ರಂದು ಹಳೆ ಕೇಸ್‌ಗಳ ಪರಿಶೀಲನೆ ಹಾಗೂ ಅ.2ರಂದು ಹೊಗೆ ತಪಾಸಣೆಯ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರು ನಗರವನ್ನು ಹೆಚ್ಚು ಸುರಕ್ಷಿತವಾಗಿರಿಸಲು, ಮಹಿಳೆಯರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳಿಗೆ ಸುರಕ್ಷತೆ ಹೆಚ್ಚು ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಎಲ್ಲರೂ ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Comments are closed.