ಕರ್ನಾಟಕ

ಭಾರತ ಬಂದ್‌: ಬೆಂಗಳೂರಿನಲ್ಲಿ ಎಂದಿನಂತೆ ಜನ ಜೀವನ; ರೈತರು, ಕನ್ನಡ ಪರ ಸಂಘಟನೆ ಮುಖಂಡರ ಬಂಧನ

Pinterest LinkedIn Tumblr

ಬೆಂಗಳೂರು: ಕೇಂದ್ರ ಸರಕಾರದ ಮೂರು ಕೃಷಿ ಕಾಯಿದೆಗಳ ವಿರುದ್ಧ ನಡೆಯುತ್ತಿರುವ ಹೋರಾಟದ ಭಾಗವಾಗಿ ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಬಂದ್‌ ಆರಂಭವಾಗಿದೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದಂತೆ ರೈತ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಎಂಟಿಸಿ ಬಸ್‌ ನಿಲ್ದಾಣದಲ್ಲಿ ಬಸ್ ಸಂಚಾರ ತಡೆಯಲು ಯತ್ನಿಸಿದ ಕನ್ನಡ ಪರಸಂಘಟನೆಗಳ ಮುಂಖಡರಾದ ಸಾ.ರಾ. ಗೋವಿಂದು, ಶಿವರಾಮೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೌರ್ಯ ವೃತ್ತದ ಬಳಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸಹಿತ ಹಲವು ಪ್ರತಿಭಟನೆಕಾರರನ್ನು ಪೊಲೀಸರು ಕರೆದೊಯ್ದಿದ್ದಾರೆ.

ಸಾ.ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಸೇರಿದಂತೆ ಹಲವು ಕಾರ್ಯಕರ್ತರು ಮತ್ತು ರೈತ ಪ್ರತಿನಿಧಿಗಳು ಮೆಜೆಸ್ಟಿಕ್ ಬಳಿಯ ಭಾಗ್ಯ ವಿನಾಯಕ ದೇವಸ್ಥಾನದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಬಸ್ ಸಂಚಾರ ತಡೆಯುವಂತಹ ಪ್ರಯತ್ನವನ್ನೂ ಮಾಡಲಾಯಿತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು.

ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ. ಈ ಬಗ್ಗೆ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಸಹ ಎಚ್ಚೆತ್ತುಕೊಳ್ಳುತ್ತಿಲ್ಲ. ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ರೈತ ವಿರೋಧಿಯಾದಂತಹ ಕಾನೂನುಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಅಲ್ಲದೆ, ಗಗನಕ್ಕೆ ಏರಿರುವ ಅಡುಗೆ ಎಣ್ಣೆ, ಪೆಟ್ರೋಲ್-ಡೀಸೆಲ್ ಬೆಲೆಯನ್ನೂ ಸಹ ಕಡಿಮೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಸಾ.ರಾ.ಗೋವಿಂದು ಒತ್ತಾಯಿಸಿದರು.

 

Comments are closed.