ಕರಾವಳಿ

ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದು ಸಚಿವ ಕೋಟ ಹೇಳಿಕೆ

Pinterest LinkedIn Tumblr

ಕುಂದಾಪುರ: ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರ ನೂತನ ಸಚಿವ ಸಂಪುಟದಲ್ಲಿ ದೊರಕಿದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯಲ್ಲಿ ರಾಜ್ಯದ ಜನರ ಸೇವೆ ಮಾಡಲು ಸಾಕಷ್ಟು ಅವಕಾಶಗಳಿದ್ದು ಈ ಅವಧಿಯಲ್ಲಿ ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಮ್ದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಭಾನುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಮೊದಲು ಧಾರ್ಮಿಕ ದತ್ತಿ ಹಾಗೂ ಮೀನುಗಾರಿಕೆ, ಬಂದರು ಹಾಗೂ ಹಿಂದುಳಿದ ವರ್ಗಗಗಳ ಇಲಾಖೆ ನಿಬಾಯಿಸಿದ ಅನುಭವ ಮಾತ್ರವಲ್ಲದೇ ಆ ವ್ಯವಸ್ಥೆಯಲ್ಲಿ ಹೊಸತನ ನೀಡುವ ಪ್ರಯತ್ನ ಮಾಡಲಾಗಿತ್ತು. ರಾಜ್ಯದಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಅವಶ್ಯಕವಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉತ್ತಮ ಅವಕಾಶ ಇದಾಗಿದ್ದು ಇಲಾಖಾ ಸೌಲಭ್ಯಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪಾರದರ್ಶಕ ವ್ಯವಸ್ಥೆಗೆ ನಾಂದಿ ಹಾಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲ. ಆದರೆ ಸಂಪನ್ಮೂಲ ಬಳಕೆಯ ಜೊತೆಗೆ ಇಲಾಖೆಯಲ್ಲಿನ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ನಿರ್ದಾಕ್ಷಿಣ್ಯವಾಗಿ ತೀರ್ಮಾನ ಕೈಗೊಳ್ಳಲಾಗುವುದು. ಬೇರೆ ಇಲಾಖೆಗಳಿಗೆ ಹೋಲಿಸಿದ್ದಲ್ಲಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಹುದ್ದೆಗಳ ಕೊರತೆ ಕಡಿಮೆ ಇದೆ. ಪ್ರಸ್ತುತ ಇರುವ ಹುದ್ದೆಗಳ ವರ್ಗವಾರು ವಿವರಗಳನ್ನು ಸಂಗ್ರಹಿಸಿ, ಅಧಿಕ ವೆಚ್ಚಕ್ಕೆ ಅವಕಾಶವಿಲ್ಲದೆ, ಅಗತ್ಯ ಸಿಬ್ಬಂದಿಗಳನ್ನು ಅವಕಾಶಕ್ಕೆ ತಕ್ಕಂತೆ ಭರ್ತಿಗೆ ಕ್ರಮ ವಹಿಸಲಾಗುವುದು. ಪಕ್ಷದ ಹಿರಿಯರ, ವಿಷಯ ತಜ್ಞರ ಸಲಹೆ, ಸಹಕಾರದೊಂದಿಗೆ ಸಚಿವಾಲಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದಲೇ ಕೆಲಸ ಆರಂಭಿಸಲಿದ್ದು ಅಧಿಕಾರಿಗಳ ಸಭೆ ನಡೆಸಲಿದ್ದೇನೆ ಎಂದರು.

ಈ ಬಾರಿ ಪರಿಶಿಷ್ಟ ವರ್ಗದವರಿಗಾಗಿ ಪ್ರತ್ಯೇಕ ಸಚಿವಾಲಯ ಆಗಿದ್ದು ಸಚಿವ ಶ್ರೀರಾಮುಲು ಅವರು ಹಿರಿಯ ಸಚಿವರಾಗಿ ಅನುಭವಸ್ಥರಾಗಿದ್ದು ಅವರ ಸಲಹೆ ಪಡೆಯುತ್ತೇನೆ. ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಗೊಳಪಡುವ ಪ.ಜಾತಿ ಸಮಾಜಕ್ಕೆ ಸಿಗುವ ಸೌಕರ್ಯಗಳನ್ನು ಯೋಜನಾಬದ್ಧವಾಗಿ ಅನುಷ್ಠಾನಗೊಳಿಸಲಾಗುವುದು. ಇಲಾಖೆ ಅಡಿಯಲ್ಲಿ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಸಾಮಾಜಿಕ ಹಾಗೂ ಆರ್ಥಿಕ ಬಡತನ ಇರುವ ಯಾರೋಬ್ಬರು ವಿದ್ಯಾರ್ಜನೆಯಿಂದ ದೂರ ಉಳಿಯುವಂತಾಗಬಾರದು ಎನ್ನುವ ಕಾರಣಕ್ಕಾಗಿ ವಿದ್ಯಾಭ್ಯಾಸದ ಪ್ರೋತ್ಸಾಹಕ್ಕಾಗಿ ವಿಶೇಷ ಮುತುವರ್ಜಿ ವಹಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡುವುದನ್ನು ಇನ್ನಷ್ಟು ವ್ಯವಸ್ಥಿತವಾಗಿ ಮಾಡಲು ತಜ್ಞರ ಸಲಹೆ ಪಡೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಮುಜರಾಯಿ ಇಲಾಖೆಗೆ ಹೊಸತನದ ಸ್ಪರ್ಷ ಕೊಟ್ಟಿರುವೆ…
ಖಾಯಂ ಆಗಿ ಒಬ್ಬರಿಗೆ ಒಂದೇ ಇಲಾಖೆ ನೀದುವುದು ಶಿಷ್ಟಾಚಾರವಲ್ಲ. ಮುಜರಾಯಿ ಇಲಾಖೆಯನ್ನು ಎರಡು ಬಾರಿ ನಿರ್ವಹಿಸಿ ಸಪ್ತಪದಿಯಂತಹ ಜನಪರ ಕೆಲಸ ಮಾಡಿದ ಸಂತಸವಿದೆ. ಮುಂದೆಯೂ ಕೊಲ್ಲೂರು ಸಹಿತ ರಾಜ್ಯದ ನೂರು ದೇವಸ್ಥಾನಗಳಲ್ಲಿ ಆಗಸ್ಟ್ ತಿಂಗಳಿನಿಂದ ಮೊದಲ್ಘೊಂಡು ಡಿಸೆಂಬರ್ ತನಕ ಪ್ರತಿ ತಿಂಗಳಿಗೆ ನಾಲ್ಕೈದು ಸಪ್ತಪದಿ ಮದುವೆ ಮುಹೂರ್ತ ನಿಗದಿಪಡಿಸಲಾಗಿದೆ. 15-20 ಜನವಾದರೆ ಕೋವಿಡ್ ನಡುವೆಯೂ ಈ ಸರಳ ಮದುವೆ ಕಾರ್ಯ ನಿರಾತಂಕವಾಗಿ ನಡೆಸಲು ಅವಕಾಶವಿದೆ.

ಅರ್ಚಕರಿಗೆ ವೇದಾಗಮ ಶಾಸ್ತ್ರ ತರಬೇತಿ…
ಕೊಲ್ಲೂರಿನಲ್ಲಿ ವೇದ ಮತ್ತು ಆಗಮ ಶಾಸ್ತ್ರಕ್ಕೆ ಸಂಬಂಧಿಸಿ ಅರ್ಚಕರಿಗೆ ಐದು ವರ್ಷಗಳ ತರಬೇತಿ ಇದ್ದು ಅದನ್ನು ಒಂದು ವರ್ಷದ ಅವಧಿಗೆ ಸೀಮಿತಗೊಳಿಸಿ ಬನಶಂಕರಿ, ಘಾಟಿ ಸುಬ್ರಮಣ್ಯ, ಕುಕ್ಕೆ ಸುಬ್ರಮಣ್ಯ, ಕೊಲ್ಲೂರು, ಶಿವಮೊಗ್ಗ ಆಂಜನೇಯ ದೇವಸ್ಥಾನದಲ್ಲಿ ತರಬೇತಿ ಶಿಬಿರ ನಡೆಸಲು ಪ್ರಸ್ತಾವನೆ ಕಳಿಸಿದ್ದು ಇದರಿಂದ ಉತ್ತಮ ಗುಣಮಟ್ಟದ ತರಬೇತಿ ಪಡೆಯುವ ಅರ್ಚಕರು ಪೂಜೆಪುನಸ್ಕಾರಗಳಿಗೆ ತಯಾರಾಗುತ್ತಾರೆನ್ನುವ ಬಗ್ಗೆ ಈಗಿನ ಮುಜರಾಯಿ ಸಚಿವರ ಗಮನಕ್ಕೂ ತರಲಾಗಿದೆ.

5%ಕ್ಕೂ ಅಧಿಕ ಪಾಸಿಟಿವ್ ರೇಟ್ ಬಂದ್ರೆ ಲಾಕ್ಡೌನ್..?
ಕೋವಿಡ್ ಪಾಸಿಟಿವಿಟಿ ರೇಟ್ 5%ಕ್ಕೂ ಅಧಿಕ ಬಂದರೆ ಲಾಕ್ ಡೌನ್ ಅನಿವಾರ್ಯ ಎಂದು ಆರೋಗ್ಯ ಇಲಾಖೆ ಹಾಗೂ ತಜ್ನರು ಹೇಳುತ್ತಾರೆ. ಇತ್ತೀಚೆಗೆ ಕೆಲವುಕಡೆ ಪಾಸಿಟಿವಿಟಿ ರೇಟ್ ದಿನದಿಂದ ಹೆಚ್ಚುತ್ತಿದು ಸರಕಾರ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದು ಸಚಿವರು ಹೇಳಿದರು.

ಸಚಿವರಿಗೆ ಪೂರ್ಣಕುಂಭ ಸ್ವಾಗತ
ಸಚಿವ ಕೊಟ ಶ್ರೀನಿವಾಸ ಪೂಜಾರಿಯವರನ್ನು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು ಸಚಿವ ಕೋಟ ಹಾಗೂ ಅವರ ಪತ್ನಿ ಶಾಂತಾ ಶ್ರೀನಿವಾಸ ಪೂಜಾರಿ ಅವರನ್ನು ದೇಗುಲದ ವತಿಯಿಂದ ಗೌರವಿಸಿದರು. ಸಚಿವರ ಪುತ್ರಿ ಶ್ರುತಿ ಇದ್ದರು.

ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪಿ.ಬಿ.ಮಹೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯಾನಂದ ಹೋಬಳಿದಾರ, ಬೆಳ್ವೆ ಗಣೇಶ್‌ ಕಿಣಿ, ಕೆ.ಪಿ.ಶೇಖರ, ಸಂಧ್ಯಾ ರಮೇಶ್‌, ರತ್ನಾ ಕುಂದರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಬಿಜೆಪಿ ಪಕ್ಷದ ಪ್ರಮುಖರಾದ ಬಾಬು ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಮಹೇಂದ್ರ ಪೂಜಾರಿ , ಪ್ರವೀಣಕುಮಾರ ಶೆಟ್ಟಿ ಕಡ್ಕೆ, ಕರಣ್ ಪೂಜಾರಿ, ಮಹೇಶ್ ಪೂಜಾರಿ ಕೋಡಿ, ಪುಷ್ಪರಾಜ್ ಶೆಟ್ಟಿ, ಸಾಮ್ರಾಟ್ ಶೆಟ್ಟಿ, ಸುರೇಂದ್ರ ಖಾರ್ವಿ, ಸದಾಶಿವ ಪಡುವರಿ, ಪ್ರಕಾಶ ಪೂಜಾರಿ ಜಡ್ಡು, ರಾಘವೇಂದ್ರ ನೆಂಪು, ಮಿಥುನ್ ದೇವಾಡಿಗ, ಸಂದೀಪ್‌ ಕೊಲ್ಲೂರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.