ಕರಾವಳಿ

ಮಂಗಳೂರಿನಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಮುಖ ರಸ್ತೆ ಮರವೂರು ಸೇತುವೆಯಲ್ಲಿ ಬಿರುಕು: ವಾಹನ ಸಂಚಾರ ನಿರ್ಬಂಧ

Pinterest LinkedIn Tumblr

ಮಂಗಳೂರು, ಜೂನ್ 15 : ಮಂಗಳೂರಿನಿಂದ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಮುಖ ರಸ್ತೆಯ ಮರವೂರು ಸೇತುವೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಂಡುಬಂದಿದೆ.

ಬಜಪೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಮರವೂರು ಸೇತುವೆ ಜೂನ್ 15 ಮಂಗಳವಾರ ಮುಂಜಾನೆ 3 ಗಂಟೆಗೆ ಭಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದ್ದು, ನಗರದಿಂದ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.

ಈ ಸೇತುವೆಯು ವಿಮಾನ ನಿಲ್ದಾಣ, ಕಟೀಲು ದೇವಸ್ಥಾನ, ನೆಲ್ಲಿ ತೀರ್ಥ, ಅದ್ಯಪಾಡಿಗೆ ಸಂಪರ್ಕ ಸಾಧಿಸುವ ಪ್ರಮುಖ ಕೊಂಡಿಯಾಗಿದೆ. ಸದ್ಯ ಸೇತುವೆ ಬಿರುಕಿನಿಂದ ಈ ಸಂಪರ್ಕ ಕೊಂಡಿ ತಪ್ಪಿದಂತಾಗಿದ್ದು, ಹಲವರಿಗೆ ಇದರ ಪರಿಣಾಮ ಬೀರಲಿದೆ.

ಮರವೂರು ಸೇತುವೆ ಬಿರುಕಿನಿಂದ ಸಂಚಾರಕ್ಕೆ ಎರಡು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ. ಕಾವೂರಿನಿಂದ ಮರವೂರು ಸೇತುವೆಯ ಇನ್ನೊಂದು ಬದಿಗೆ ಹೋಗಲು ಬಯಸುವವರು ಕಾವೂರು-ಕೂಳೂರು-ಕೆಬಿಎಸ್ ಜೋಕಟ್ಟೆ-ಪೋರ್ಕೊಡಿ-ಬಜ್ಪೆ ಮಾರ್ಗ ಅಥವಾ ಪಚ್ಚನಾಡಿ-ವಾಮಂಜೂರು-ಗುರುಪುರ-ಕೈಕಂಬ-ಬಜ್ಪೆ ಮಾರ್ಗವನ್ನು ಬಳಸಬಹುದಾಗಿದೆ.

ಬಿರುಕು ತುಂಬಾ ಆಳ ಮತ್ತು ಅಗಲವಾಗಿದ್ದು, ಯಾವುದೇ ಸಮಯದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯಿದೆ. ಗುರುಪುರ ನದಿಯಲ್ಲಿರುವ ಸೇತುವೆಯ ಕೆಳಗೆ ನಡೆಯುತ್ತಿರುವ ಮರಳು ಗಣಿಗಾರಿಕೆಯು ಬಿರುಕಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಕರಾವಳಿ ಭಾಗದಲ್ಲಿ ಕಳೆದ ಮೂರು ನಾಲ್ಕು ದಿನದಿಂದ ಭಾರೀ ಮಳೆಯಾಗುತ್ತಿದೆ. ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಇಲ್ಲಿ ಹೊಸ ಸೇತುವೆ ಕಾಮಗಾರಿ ಹಿನ್ನೆಲೆ ನೀರಿನ ಹರಿವು ಒಂದೇ ಭಾಗದಲ್ಲಿ ಹೆಚ್ಚಾಗಿತ್ತು, ಹೀಗಾಗಿ ಸೇತುವೆಯ ಮೊದಲ ಪಿಲ್ಲರ್ ಬಳಿ ಹಾನಿಯಾಗಿದೆ.

ಬಜಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ. ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.

 

Comments are closed.