ಕರಾವಳಿ

ಮರವೂರು ಸೇತುವೆಯಲ್ಲಿ ಬಿರುಕು ಹಿನ್ನೆಲೆ ವಾಹನ ಸಂಚಾರ ಸ್ಥಗಿತ : ಇಲ್ಲಿದೆ ಬದಲಿ ರಸ್ತೆಯ ವಿವರ

Pinterest LinkedIn Tumblr

ಮಂಗಳೂರು, ಜೂನ್ 15 : ಭಾರಿ ಮಳೆಯಿಂದಾಗಿ ಮಂಗಳೂರು ಹೊರವಲಯದ ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆಯ ಪಿಲ್ಲರ್ ಕುಸಿದು ಸೇತುವೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ಜೂನ್ 15 ಮಂಗಳವಾರ ಮುಂಜಾನೆ 3 ಗಂಟೆಗೆ ಈ ಘಟನೆ ನಡೆದಿದ್ದು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದರು.

ಮಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಬಜಪೆಯಿಂದ ಮಂಗಳೂರು ಕಡೆಗೆ ಬರುವಾಗ ಸೇತುವೆಯ ಮೊದಲ ಅಂಕಣ ಸುಮಾರು ಮೂರು ಅಡಿ ಕೆಳಗೆ ಕುಸಿದು ನಿಂತಿದೆ. ಮಂಗಳೂರು-ಬಜಪೆ-ಕಟೀಲು ಸಂಪರ್ಕ ರಸ್ತೆ ಇದಾಗಿದ್ದು, ಪಲ್ಗುಣಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಮರವೂರು ಸೇತುವೆ ಬಿರುಕಿನಿಂದ ಸಂಚಾರಕ್ಕೆ ಎರಡು ಪರ್ಯಾಯ ಮಾರ್ಗಗಳನ್ನು ಗುರುತಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.

ಕಾವೂರಿನಿಂದ ಮರವೂರು ಸೇತುವೆಯ ಇನ್ನೊಂದು ಬದಿಗೆ ಹೋಗಲು ಬಯಸುವವರು ಕಾವೂರು-ಕೂಳೂರು-ಕೆಬಿಎಸ್ ಜೋಕಟ್ಟೆ-ಪೋರ್ಕೊಡಿ-ಬಜ್ಪೆ ಮಾರ್ಗ ಅಥವಾ ಪಚ್ಚನಾಡಿ-ವಾಮಂಜೂರು-ಗುರುಪುರ-ಕೈಕಂಬ-ಬಜ್ಪೆ ಮಾರ್ಗವನ್ನು ಬಳಸಬಹುದಾಗಿದೆ.

ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ-ಗುರುಪುರ ರಸ್ತೆಯಾಗಿ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಲಾಗಿದೆ. ಉಡುಪಿಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ವಿಮಾನ ನಿಲ್ದಾಣಕ್ಕೆ ತೆರಳುವಂತೆ ಪೊಲೀಸರು ಸೂಚಿಸಿಲಾಗಿದೆ ಎಂದು ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಮರಳು ಗಣಿಗಾರಿಕೆ ಬಿರುಕಿಗೆ ಕಾರಣವಾಯಿತೇ?

ಬಿರುಕು ತುಂಬಾ ಆಳ ಮತ್ತು ಅಗಲವಾಗಿದ್ದು, ಯಾವುದೇ ಸಮಯದಲ್ಲಿ ಸೇತುವೆ ಕುಸಿಯುವ ಸಾಧ್ಯತೆಯಿದೆ. ಗುರುಪುರ ನದಿಯಲ್ಲಿರುವ ಸೇತುವೆಯ ಕೆಳಗೆ ನಡೆಯುತ್ತಿರುವ ಮರಳು ಗಣಿಗಾರಿಕೆಯು ಬಿರುಕಿಗೆ ಕಾರಣವಾಗಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಒಂದು ಮೂಲದ ಪ್ರಕಾರ ಹೊಸ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಒಂದೇ ಭಾಗದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಪರಿಣಾಮವಾಗಿ ಸೇತುವೆಯ ಪಿಲ್ಲರ್ ಕುಸಿದಿದ್ದು, ಸೇತುವೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

Comments are closed.