
ಮಂಗಳೂರು : ಖಾಸಗಿ ಆಸ್ಪತ್ರೆಗಳ ಬಿಲ್‍ಗಳ ಪರಿಶೀಲನೆಗೆ ಜಿಲ್ಲಾಡಳಿತ ಆಡಿಟ್ ತಂಡವನ್ನು ರಚಿಸಲಾಗಿದ್ದು, ತಂಡವು ಖಾಸಗಿ ಆಸ್ಪತೆಗಳ ಬಿಲ್‍ನ ಆಡಿಟ್ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. ಈ ವರೆಗೆ 11 ಖಾಸಗಿ ಆಸ್ಪತ್ರೆಯ 896 ಕೋವಿಡ್ ರೋಗಿಗಳ ಚಿಕಿತ್ಸಾ ಬಿಲ್‍ಗಳನ್ನು ಪರಿಶೀಲಿಸಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.
ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಿಲ್‍ಗೆ ಸಂಬಂಧಿಸಿದ ಕುರಿತ್ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಸಂಬಂಧ ಖಾಸಗಿ ಆಸ್ಪತ್ರೆಯ ಮೇಲುಸ್ತುವಾರಿಗೆ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳು ತಮ್ಮ ಹಂತದಲ್ಲಿಯೇ ಹೆಚ್ಚುವರಿ ಶುಲ್ಕವನ್ನು ಪಡೆಯದ ಹಾಗೆ ಜವಬ್ದಾರಿ ವಹಿಸಿ ನೋಡಬೇಕು ಎಂದರು.
ಸಾರ್ವಜನಿಕರು ಕೋವಿಡ್ ಚಿಕಿತ್ಸೆ ಪಡೆದು ಶುಲ್ಕವನ್ನು ಭರಿಸುವಾಗ ಸರ್ಕಾರ ನಿಗಧಿಪಡಿಸಿರುವ ದರವನ್ನು ನೀಡಬೇಕು. ಒಂದೊಮ್ಮೆ ಹೆಚ್ಚುವರಿ ಶುಲ್ಕದ ಬಿಲ್ಲನ್ನು ಖಾಸಗಿ ಆಸ್ಪತ್ರೆಗಳು ನೀಡಿದಾಗ, ಕೂಡಲೇ ಜಿಲ್ಲಾಡಳಿತ ನೇಮಕ ಮಾಡಿರುವ ನೋಡಲ್ ಅಧಿಕಾರಿಗಳ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ದೂರನ್ನು ನೀಡಬೇಕು ಎಂದರು.
ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ನೇರವಾಗಿ ಬಂದಂತಹ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ಸೇರಿದಂತೆ ವೆಚ್ಚದ ಬಗ್ಗೆ ಸಲಹೆ ಸೂಚನೆಗಳನ್ನು ನೋಡಲ್ ಅಧಿಕಾರಿಗಳು ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆಗುವ ಶುಲ್ಕ ಭರಿಸುವ ಗೊಂದಲಗಳನ್ನು ನಿವಾರಿಸಲು ಸಾಧ್ಯ ಎಂದರು.
ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಜವಬ್ದಾರಿಯನ್ನು ಚಾಚುತಪ್ಪದೇ ನಿರ್ವಹಿಸಬೇಕು. ತಮಗೆ ವಹಿಸಿರುವ ಕಾರ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉತ್ತರ ಶಾಸಕ ಡಾ. ಭರತ್ ಶೆಟ್ಟಿ.ವೈ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
Comments are closed.