ಕರಾವಳಿ

ಮಸೀದಿ ಮದ್ರಸಗಳಿಗೆ ತಸ್ತಿಕ್ ಭತ್ತೆ : ಹಿಂದು ಧಾರ್ಮಿಕ ದತ್ತಿ ಇಲಾಖೆ ನಿರ್ಧಾರಕ್ಕೆ ತೀವ್ರ ವಿರೋಧ

Pinterest LinkedIn Tumblr

ಮಂಗಳೂರು, ಜೂನ್.09: ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಮಸೀದಿ ಮದ್ರಸಗಳಿಗೆ ತಸ್ತಿಕ್ ಭತ್ತೆ ನೀಡಲು ನಿರ್ಧಾರಿಸುವುದಕ್ಕೆ ವಿಶ್ವ ಹಿಂದು ಪರಿಷದ್ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಕೂಡಲೇ ಈ ನಿರ್ಧಾರವನ್ನು ಸರಕಾರ ಹಿಂಪಡೆಯ ಬೇಕೆಂದು ಆಗ್ರಹಿಸಿ ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದೆ.

ರಾಜ್ಯದಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಅರ್ಚಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಾರಣ ಸರಕಾರದಿಂದ ತಸ್ತಿಕ್ ಭತ್ತೆ ನೀಡಲು ಆದೇಶಿಸಿದನ್ನು ವಿಶ್ವ ಹಿಂದು ಪರಿಷತ್ ಸ್ವಾಗತಿಸುತ್ತದೆ. ಆದರೆ ಅದೇ ಆದೇಶದ ಪ್ರಕಾರ ತಸ್ತಿಕ್ ಹಣವನ್ನು ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ದಕ್ಷಿಣಕನ್ನಡ ಜಿಲ್ಲೆಯ 41 ಮಸೀದಿ, ಮದರಸದ ಮೌಲ್ವಿಗಳಿಗೆ ನೀಡಲು ನಿರ್ಧರಿಸಿದ್ದನ್ನು ವಿಶ್ವ ಹಿಂದು ಪರಿಷದ್ ವಿರೋಧಿಸುತ್ತದೆ.

ದೈವಸ್ಥಾನ, ದೇವಸ್ಥಾನದ ಹಣವನ್ನು ಹಿಂದುಗಳಿಗೆ ಮತ್ತು ದೇವಸ್ಥಾನದ ಕಾರ್ಯಗಳಿಗೆ ಮಾತ್ರ ಉಪಯೋಗಿಸಬೇಕು ವಿನಹ ಮಸೀದಿ, ಮದರಸಗಳಿಗೆ ಉಪಯೋಗಿಸುವುದನ್ನು ಖಂಡಿಸುವ ಮೂಲಕ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಧಾರ್ಮಿಕ ದತ್ತಿ ಇಲಾಖೆ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿದ ಸಚಿವರು ನಿರ್ಧಾರವನ್ನು ಹಿಂದೆ ಪಡೆಯುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.

ಜಿಲ್ಲಾ ಅಧ್ಯಕ್ಷರಾದ ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Comments are closed.