
ಮಂಗಳೂರು, ಮೇ 27: ತುಳುನಾಡಿನ ಮೂಲ ನಿವಾಸಿ, ಅಳಿವಿನಂಚಿಗೆ ಜಾರುತ್ತಿರುವ ಕೊರಗ ಸಮುದಾಯದ ಮೊಟ್ಟ ಮೊದಲ ಪದವೀಧರ, ಕೊರಗ ಸಂಘಟನೆಯ ನಾಯಕ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವ ಅಧ್ಯಕ್ಷರು, ಹೋರಾಟಗಾರ ಬಿಜೈ ಕಾಪಿಕಾಡ್ ಕುದ್ಮಲ್ ಗಾರ್ಡನ್ ನಿವಾಸಿ ಪಳ್ಳಿ ಗೋಕುಲ್ ದಾಸ್ (90 ವರ್ಷ) ಅವರು ಬುಧವಾರ ಬೆಳಗ್ಗೆ 8:25ಕ್ಕೆ ಇಹಲೋಕ ತ್ಯಜಿಸಿದರು.
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಳ್ಳಿ ಗೋಕುಲ್ದಾಸ್ ಅವರು ಕಳೆದ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಮಂಗಳೂರಿನ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳೆಂದು ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಭೂಮಿಗಾಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಪಿ. ಗೋಕುಲ್ದಾಸ್, ಕೊರಗ ಸಮುದಾಯಕ್ಕೆ ಆಹಾರ ಒದಗಿಸುವ ಕುರಿತಾದ ಹೋರಾಟದ ನೇತೃತ್ವವನ್ನೂ ವಹಿಸಿದ್ದವರು.
ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಗೋಕುಲದಾಸರು ಕೊರಗ ಸಮುದಾಯದ ಮೊಟ್ಟ ಮೊದಲ ಪಧವೀದರರಾಗಿದ್ದರು. ಕೊರಗ ಸಮುದಾಯಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಹುಟ್ಟು ಹೋರಾಟಗಾರ, ಉತ್ತಮ ಸಂಘಟಕ ಹಾಗೂ ಒಳ್ಳೆಯ ಮಾತುಗಾರರಾಗಿದ್ದರು. ಇವೆಲ್ಲವಕ್ಕೂ ಕಲಶವಿಟ್ಟಂತೆ ಅವರೊಬ್ಬ ಮಹಾ ಮಾನವತವಾದಿಯಾಗಿದ್ದರು.
ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಗೋಕುಲದಾಸರು ನಿವೃತ್ತಿ ಜೀವನವನ್ನು ಮಂಗಳೂರಿನ ಬಿಜೈ ಕಾಪಿಕಾಡ್ ಸಮೀಪದ ಕುದ್ಮಲ್ ಗಾರ್ಡನ್ನ ತಮ್ಮ ಸ್ವಗೃಹದಲ್ಲಿ ಕಳೆಯುತ್ತಿದ್ದರು. ತಮ್ಮ ಇಳಿ ವಯಸ್ಸಿ ನಲ್ಲಿಯೂ ಕೊರಗ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿದ್ದರು.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೊರಗರ ಯಾವುದೇ ಕಾರ್ಯಕ್ರಮವಿದ್ದರೂ ಅದಕ್ಕೆ ತಪ್ಪದೇ ಹಾಜರಾಗುತಿದ್ದರು. ‘ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ’ದ ಗೌರವಾಧ್ಯಕ್ಷರೂ ಆಗಿದ್ದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧುಗಳು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
Comments are closed.