ಕರಾವಳಿ

ಉಳ್ಳಾಲದಲ್ಲಿ ಪೊಲೀಸ್ ಕಾರ್ಯಾಚರಣೆ : 200 ಕೆ.ಜಿ ಗಾಂಜಾ, ತಲವಾರು, ಮೊಬೈಲ್‌ ಸಹಿತಾ ನಾಲ್ವರ ಬಂಧನ

Pinterest LinkedIn Tumblr

ಮಂಗಳೂರು, ಮೇ.26 : ಮೂಡುಬಿದಿರೆ ಪೊಲೀಸರು ಹಾಗೂ ದಕ್ಷಿಣ ಉಪವಿಭಾಗ ಸ್ಕ್ವಾಡ್‌‌ ಸಿಬ್ಬಂದಿಗಳು ನಡೆಸಿದ ಮಹತ್ವದ ಕಾರ್ಯಾಚರಣೆ ಮೂಲಕ ಉಳ್ಳಾಲದಲ್ಲಿ ಭಾರೀ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ತಂಡವನ್ನು ಪತ್ತೆ ಹಚ್ಚಿ ಅಪಾರ ಪ್ರಮಾಣದ ಗಾಂಜಾ ಸಹಿತಾ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡಿನ ಮಂಜೇಶ್ವರ ನಿವಾಸಿ ಮೊಯಿದ್ದಿನ್ ನವಾಸ್ (34), ಕಾಸರಗೋಡು ನಿವಾಸಿ ಮಹಮ್ಮದ್ ಫಾರೂಕ್ (24), ಕುಶಾಲನಗರ ನಿವಾಸಿ ಸೈಯದ್ ಮಹಮ್ಮದ್(31), ಮಂಗಳೂರಿನ ಮುಡಿಪು ನಿವಾಸಿ ಮಹಮ್ಮದ್ ಅನ್ಸಾರ್ (23) ಬಂಧಿತ ಆರೋಪಿಗಳು. ಬಂಧಿತರಿಂದ 200 ಕೆ.ಜಿ ಗಾಂಜಾ, 3 ತಲವಾರು, 4 ಮೊಬೈಲ್‌‌ ಹಾಗೂ 1 ವೈಫೈ ಸೆಟ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದ ಆರೋಪಿ ಪತ್ತೆಗಾಗಿ ಮೇಲಾಧಿಕಾರಿಗಳ ಆದೇಶದಂತೆ ಮೂಡುಬಿದಿರೆ ಪೊಲೀಸ್‌ ಠಾಣಾ ಪಿಎಸ್‌ಐ ಸುದೀಮ್‌‌ ಹಾಗೂ ಸಿಬ್ಬಂದಿಗಳು ಹಾಗೂ ದಕ್ಷಿಣ ಉಪವಿಭಾಗ ಸ್ಕ್ವಾಡ್‌‌ ಸಿಬ್ಬಂದಿಗಳು ಉಳ್ಳಾಲ ವ್ಯಾಪ್ತಿಯಲ್ಲಿ ಖಚಿತ ಮಾಹಿತಿಯ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಅಯುಕ್ತ ಶಶಿಕುಮಾರ್ ಅವರು ತಿಳಿಸಿದ್ದಾರೆ.

ಆರೋಪಿಗಳು ಮೀನು ಸಾಗಾಟದ ಕಂಟೇನರ್‌‌ ಲಾರಿ ಹಾಗೂ ಐಷಾರಾಮಿ ಕಾರಿನಲ್ಲಿ ಆಂಧ್ರ ಪ್ರದೇಶದಿಂದ ಕೇರಳದ ಕಾಸರಗೋಡಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಆರೋಪಿಗಳು ಮಂಗಳೂರು ಸೇರಿದಂತೆ ಕೊಡಗು, ಹಾಸನ ಹಾಗೂ ಕಾಸರಗೋಡಿಗೆ ಗಾಂಜಾ ಪೂರೈಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರೀ ಪ್ರಮಾಣದಲ್ಲಿ ಗಾಂಜಾ ಸಾಗಾಟ ಜಾಲ ಭೇದಿಸಿದ ಪೊಲೀಸ್ ತಂಡಕ್ಕೆ ರೂ.25 ಸಾವಿರ ನಗದು ಬಹುಮಾನವನ್ನು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಘೋಷಿಸಿದ್ದಾರೆ.

Comments are closed.