ಕರಾವಳಿ

ಸಿಂಪಲ್ ಆಗಿ ಗೃಹಪ್ರವೇಶ ಮಾಡಿ, ಉಳಿಸಿದ ಹಣದಲ್ಲಿ ಸರಕಾರಿ ಆಸ್ಪತ್ರೆಗೆ ಮೆಡಿಸಿನ್ ಕಿಟ್ ನೀಡಿದ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

Pinterest LinkedIn Tumblr

ಕುಂದಾಪುರ: ಕೊರೋನಾ ಹಿನ್ನೆಲೆಯಲ್ಲಿ ಹಲವಾರು ಮಂದಿ ಅನೇಕ ರೀತಿಯಲ್ಲಿ ಉತ್ತಮ ಸೇವೆಯಲ್ಲಿ ತೊಡಗಿದ್ದಾರೆ. ಅವರಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ವಿಶಿಷ್ಟವಾಗಿ ಕೊಡುಗೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇತ್ತೀಚೆಗಷ್ಟೆ ತಮ್ಮ ಗೃಹ ಪ್ರವೇಶವನ್ನು ಸರಳ ರೀತಿಯಲ್ಲಿ ನೆರವೆರಿಸಿದ್ದು ದುಂದು ವೆಚ್ಚ ಮಾಡದೆ ಇರುವ ಹಿನ್ನೆಲೆ ಉಳಿದ ದುಡ್ಡಲ್ಲಿ ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಅಗತ್ಯ ಔಷಧೀಯ ಕಿಟ್ ಗಳನ್ನು ಕೋವಿಡ್ ನೋಡೆಲ್ ಅಧಿಕಾರಿ ಡಾ.ನಾಗೇಶ್ ಅವರಿಗೆ ಹಸ್ತಾಂತರಿಸಿದ್ದಾರೆ.

ಕಿಟ್ ಸ್ವೀಕರಿಸಿ ಮಾತನಾಡಿದ ಸರ್ಕಾರಿ ಆಸ್ಪತ್ರೆಯ ಕೋವಿಡ್ ನೋಡೆಲ್ ಅಧಿಕಾರಿ ಡಾ. ನಾಗೇಶ್, ಪ್ರದೀಪ್ ರವರು ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ. ಆಸ್ಪತ್ರೆಯಲ್ಲಿ ಐಸೋಲೇಷನ್ ನಲ್ಲಿ ಇರುವ ಕೋವಿಡ್ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ಬೇಕಾದ ಜೀವರಕ್ಷಕ ಔಷಧಿಗಳನ್ನು ನೀಡಿದ್ದಾರೆ. ಸಾವಿರಾರು ಬೆಲೆಯ ಉತ್ತಮ ಗುಣಮಟ್ಟದ ಔಷಧಿಗಳನ್ನು ನೀಡಿದ್ದಾರೆ. ಇವರ ಈ ನಡೆ ಇತರರಿಗೆ ಸ್ಪೂರ್ತಿ ಎಂದರು.

ಈ ಸಂದರ್ಭ ಮಾತನಾಡಿದ ಪ್ರದೀಪ್ ಕುಮಾರ್ ಶೆಟ್ಟಿ, ಇತ್ತೀಚೆಗೆ ಮನೆ ಗೃಹಪ್ರವೇಶವನ್ನು ಸರಳ ರೀತಿಯಲ್ಲಿ ಮಾಡಿದೆ. ದುಂದು ವೆಚ್ಚವನ್ನು ತಪ್ಪಿಸಿ ಆ ಹಣವನ್ನು ಆಸ್ಪತ್ರೆಗೆ ನೀಡುವ ಬಗ್ಗೆ ಚಿಂತಿಸಿದ್ದು, ಆಸ್ಪತ್ರೆಗಳಲ್ಲಿ ತುರ್ತು ಔಷಧಿಯ ಕೊರತೆ ಇರುವುದನ್ನು ಕಾಣುತ್ತಿದ್ದೇವೆ. ಹಾಗಾಗಿ ಆಸ್ಪತ್ರೆಗ ನಾನು ಐಸೋಲೇಷನ್ ಔಷಧಿ ಕಿಟ್ ವಿತರಿಸಿದ್ದೇನೆ ಎಂದರು.

ಈ ಸಂದರ್ಭ ಅಂಪಾರು ಗ್ರಾ.ಪಂ ಸದಸ್ಯ ಗಣೇಶ್ ಮೊಗವೀರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿರುವ ವೈದ್ಯರುಗಳು, ಸಿಬ್ಬಂದಿಗಳು ಇದ್ದರು.

Comments are closed.