
ಮಂಗಳೂರು : ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಕಾಂಗ್ರೇಸ್ ಹವಣಿಸುತ್ತಿದೆ. ಆದರೆ ಜನರು ಬುದ್ಧಿವಂತರಾಗಿದ್ದಾರೆ. ಕಾಂಗ್ರೇಸಿನ ನೀಚ ರಾಜಕಾರಣವನ್ನು ಜನತೆ ಸರಿಯಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ದೇಶವು ಕೋವಿಡ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಕಾಂಗ್ರೇಸ್ ತನ್ನ ಕಾರ್ಯಕರ್ತರಿಗೆ ನೀಡಿರುವ ಟೂಲ್ ಕಿಟ್ ಒಂದು ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಬಲಿಗೊಡಲು ಕಾಂಗ್ರೇಸ್ ಪ್ರಯತ್ನಿಸುತ್ತಿದೆ. ಕಳೆದ 70 ವರ್ಷಗಳ ಕಾಲ ಜನರನ್ನು ವಂಚಿಸಿ ಆಡಳಿತಕ್ಕೆ ಬಂದ ಕಾಂಗ್ರೇಸ್ ತನ್ನ ಹಳೇ ಚಾಳಿಯನ್ನು ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.
ದೇಶ ಸಂಕಟದಲ್ಲಿರುವ ಸಂದರ್ಭವನ್ನು ಉಪಯೋಗಿಸಿಕೊಂಡು ಬಿಜೆಪಿ ವಿರೋಧಿ ಅಲೆ ಹುಟ್ಟಿಸುವುದಕ್ಕಾಗಿ ಕಾಂಗ್ರೇಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಿಗಿಡಲು ಸ್ಥಳೀಯ ಬುದ್ಧಿಜೀವಿಗಳನ್ನು, ಸಾಮಾಜಿಕ ಜಾಲತಾಣಗಳನ್ನು, ಜಾಗತಿಕ ಮಟ್ಟದಲ್ಲಿ ಕೆಲವೊಂದು ಮಾಧ್ಯಮಗಳ ಮೂಲಕ ಸುಳ್ಳು ಸುದ್ಧಿಗಳನ್ನು ಬಿತ್ತರಿಸಿ ಜನರಲ್ಲಿ ಭೀತಿ ಹುಟ್ಟಿಸಲು ಕಾಂಗ್ರೇಸ್ ಪ್ರಯತ್ನಿಸಿದೆ.
ಅದಕ್ಕಾಗಿ ಬೆಡ್ ಬ್ಲಾಕಿಂಗ್ ಮಾಡಿಸುವಂತೆ ಟೂಲ್ ಕಿಟ್ ನಲ್ಲಿ ಉಲ್ಲೇಖಿಸಿರುವುದು ಕಾಂಗ್ರೇಸಿನ ನೀಚ ರಾಜಕೀಯದ ಭಾಗವಾಗಿದೆ. ಕಾಂಗ್ರೇಸಿನ ಈ ಪ್ರಮಾಣವನ್ನು ದೇಶ ಎಂದೆಂದಿಗೂ ಕ್ಷಮಿಸುವುದಿಲ್ಲ ಎಂದು ಶಾಸಕ ಕಾಮತ್ ಹೇಳಿದ್ದಾರೆ.
Comments are closed.